ಹುಬ್ಬಳ್ಳಿ : ಅಕ್ಕಪಕ್ಕ ರಾಜ್ಯಗಳಲ್ಲಿ ಕೊರೊನಾ ಪ್ರಕರಣ ಸಂಖ್ಯೆ ಹೆಚ್ಚಾಗುತ್ತಿವೆ. ಉತ್ತರ ಕರ್ನಾಟಕದಲ್ಲಿ ಪ್ರವಾಹ ಉಂಟಾಗಿದೆ. ಇಂತಹ ಸಂದರ್ಭದಲ್ಲಿ ಜನರ ಸಂಕಷ್ಟಕ್ಕೆ ಬರಬೇಕಿದ್ದ ರಾಜ್ಯ, ಕೇಂದ್ರ ಸರ್ಕಾರಗಳಿಗೆ ಅಧಿಕಾರವೇ ಮುಖ್ಯವಾಗಿದೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಂದೀಪ್ ಸುರ್ಜೇವಾಲಾ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹುಬ್ಬಳ್ಳಿಯ ಖಾಸಗಿ ಹೋಟೆನಲ್ಲಿ ನಡೆದ ಬೆಳಗಾವಿ ವಿಭಾಗ ಮಟ್ಟದ ನಾಯಕರ ಸಭೆಯಲ್ಲಿ ಭಾಗವಹಿಸಿ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಬಿಜೆಪಿ ನಾಯಕರು ಅಧಿಕಾರಕ್ಕಾಗಿ ದೆಹಲಿಗೆ ದೌಡಾಯಿಸ್ತಾರೇ ಹೊರತು ಜನರ ಸಂಕಷ್ಟ ನಿವಾರಣೆಗಾಗಿ ಅಲ್ಲ. ಬಿಜೆಪಿ ಪಾರ್ಟಿ ಇದೊಂದು ಭ್ರಷ್ಟಾಚಾರ ಪಾರ್ಟಿಯಾಗಿದೆ. RTGS ಮೂಲಕ ಬಿಜೆಪಿ ಭ್ರಷ್ಟಾಚಾರ ಮಾಡುತ್ತಿದೆ ಎಂದು ಆರೋಪಿಸಿದರು.
‘ಬಿಜೆಪಿ ಭ್ರಷ್ಟ ಸರ್ಕಾರ’
ರಾಜ್ಯ ಬಿಜೆಪಿ ನಾಯಕರಿಗೆ ರಾಜಕೀಯವೇ ಮುಖ್ಯವಾಗಿದೆ. ಸಂಪುಟ ಸೇರಲು ಒಬ್ಬರಿಗಿಂತ ಒಬ್ಬರು ಪೈಪೋಟಿ ನಡೆಸುತ್ತಿದ್ದಾರೆ. ಬಿಜೆಪಿ ಶಾಸಕರುಗಳು ಜನರಿಗೆ ಮಹತ್ವ ನೀಡುತ್ತಿಲ್ಲ. ನೆರೆ ಪರಿಹಾರ ಹಣ ಕೇಂದ್ರದಿಂದ ತಂದು ನೀಡುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಸದ್ಯ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರ ನಡೆಸುತ್ತಿದ್ದು, ಭ್ರಷ್ಟಾಚಾರ ಜಾಸ್ತಿ ಆಗಿದೆ. ಸರ್ಕಾರ ಗೂಢಾಚಾರ ಮಾಡುತ್ತಿದೆ. ಭ್ರಷ್ಟಾಚಾರ, ಪಕ್ಷಾಂತರ, ಬೇಹುಗಾರಿಕೆ ಮೂಲಕ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ ಎಂದಿದ್ದಾರೆ.
ರಾಜ್ಯದಲ್ಲಿ ಸಿಎಂ ಬದಲಾವಣೆ ಆಗಿದೆ. ಆದರೆ, ಸರ್ಕಾರದ ಸ್ವಭಾವ, ನೀತಿ ಮಾತ್ರ ಬದಲಾಗಿಲ್ಲ. ಸದ್ಯದ ಸಿಎಂ ರಬ್ಬರಸ್ಟ್ಯಾಂಪ್ ಆಗಿದ್ದಾರೆ. ರಾಜ್ಯದಲ್ಲಿ ಪ್ರವಾಹ ಬಂದೂ ಸಾಕಷ್ಟು ಜನರು ಮನೆ, ಬೆಳೆ ಕಳೆದುಕೊಂಡಿದ್ದಾರೆ. ಇದರ ಮಧ್ಯೆ ಸಿಎಂ ಬದಲಾವಣೆ ಮಾಡಿದ್ದು, ರಬ್ಬರ್ಸ್ಟ್ಯಾಂಪ್ ತರಹ ಮತ್ತೊಬ್ಬರನ್ನ ಸಿಎಂ ಆಗಿ ಈಗ ತಂದು ಕೂರಿಸಿದ್ದಾರೆ.
ಜಿಎಸ್ಟಿ ಬಾಕಿ ತರುವಲ್ಲಿ ವಿಫಲ
ವಿಪಕ್ಷ ಕಾಂಗ್ರೆಸ್ ಜನರ ನೆರವಿಗೆ ಬಂದರೆ, ಬಿಜೆಪಿಗರು ಸಚಿವ ಸ್ಥಾನಕ್ಕಾಗಿ ದೆಹಲಿಗೆ ಓಡಾಟ ನಡೆಸುತ್ತಿದ್ದಾರೆ. ಕೊರೊನಾ ನಿರ್ವಹಣೆಯಲ್ಲೂ ಸರ್ಕಾರ ಸೋತಿದೆ. ಪ್ರವಾಹ ನಿರ್ವಹಣೆಯಲ್ಲೂ ಎರಡು ಸರ್ಕಾರಗಳು ವಿಫಲವಾಗಿವೆ ಎಂದು ಕಿಡಿಕಾರಿದರು.
ಕೇಂದ್ರದಿಂದ 30 ಸಾವಿರ ಕೋಟಿ ಜಿಎಸ್ಟಿ ಹಣ ಬರಬೇಕಿದೆ. ಆದರೆ, ಜಿಎಸ್ಟಿ ಹಣ ತರೋದು ಬಿಟ್ಟು ಸಾರ್ವಜನಿಕ ವೆಚ್ಚ ಕಡಿಮೆ ಮಾಡಿ ಅಂತಾ ಹೇಳುತ್ತಿದ್ದಾರೆ. ಬಿಜೆಪಿಯವರಿಗೆ ಜನರ ಕಾಳಜಿ ಮುಖ್ಯವಲ್ಲ ಎಂದು ಬಿಜೆಪಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಅನಿವಾರ್ಯವಾಗಿ ನ್ಯಾಯಾಲಯದ ಆದೇಶ ಇರೋದ್ರಿಂದ ಕೇಂದ್ರ ಸರ್ಕಾರ ಮೀಸಲಾತಿ ನೀಡುತ್ತಿದೆ. ಮೋದಿಯವರು 7 ವರ್ಷದಿಂದ ಹಿಂದುಳಿದ ವರ್ಗಗಳ ವಿರೋಧಿ ಆಗಿದ್ದಾರೆ. ನ್ಯಾಯಾಲಯದ ಆದೇಶದ ಭಯದಿಂದ ಮೀಸಲಾತಿ ಜಾರಿ ಮಾಡಿದೆ.
ಬಿಜೆಪಿ ಯಾವತ್ತೂ ಹಿಂದುಳಿದವರಿಗೆ ಬೆಂಬಲ, ಸಹಾಯ ಮಾಡಿಲ್ಲ. ಈ ಕುರಿತು ಸೋನಿಯಾ ಗಾಂಧಿಯವರು ಪತ್ರ ಬರೆದಿದ್ದರು. ಆದ್ರೆ, ಅವರು ಅದಕ್ಕೆ ಪ್ರತಿಕ್ರಿಯೆ ಸಹ ನೀಡಲಿಲ್ಲ. ಮದ್ರಾಸ್ ಹೈಕೋರ್ಟ್ಗೆ ವಿದ್ಯಾರ್ಥಿ ಹೋದ ಮೇಲೂ ನ್ಯಾಯಾಲಯದ ಆದೇಶ ಪಾಲಿಸಿರಲಿಲ್ಲ ಎಂದು ಕುಟುಕಿದರು.