ಹುಬ್ಬಳ್ಳಿ : ಭಾರೀ ಮಳೆ ಮತ್ತು ಪ್ರವಾಹದ ಪರಿಣಾಮ ಜಿಲ್ಲೆಯ ಹಲವು ಸೇತುವೆಗಳು ಕೊಚ್ಚಿ ಹೋಗಿದ್ದು, ರಸ್ತೆಗಳು ಸಂಪೂರ್ಣ ಹಾಳಾಗಿ ಜನಸಂಪರ್ಕವೇ ಇಲ್ಲದಂತಾಗಿದೆ. ಇಷ್ಟಾದರೂ ದುರಸ್ತಿ ಮಾಡಲು ಅಧಿಕಾರಿಗಳಾಗಲಿ, ಜನಪ್ರತಿನಿಧಿಯಾಗಲಿ ಇತ್ತ ಸುಳಿಯುತ್ತಿಲ್ಲ ಎಂಬುದು ಇಲ್ಲಿನ ಗ್ರಾಮಸ್ಥರ ಆರೋಪವಾಗಿದೆ.
ನವಲಗುಂದ ತಾಲೂಕಿನ ಶಿರಕೋಳ ಹನಸಿ ಗ್ರಾಮದ ನಡುವಿನ ರಸ್ತೆ ಸಂಪೂರ್ಣ ಕೊಚ್ಚಿಕೊಂಡು ಹೋಗಿ ಹತ್ತು ದಿನಗಳೆ ಕಳೆದಿದೆ. ಆದರೆ ಈ ಬಗ್ಗೆ ಯಾರು ಕ್ಯಾರೆ ಅನ್ನುತಿಲ್ಲ.
ರೈತರು ಮತ್ತು ಸಾರ್ವಜನಿಕರು ಜಮೀನುಗಳಿಗೆ, ಬೇರೆ ಗ್ರಾಮಕ್ಕೆ ತೆರಳಲು ಆಗದಂತಹ ಸ್ಥಿತಿ ನಿರ್ಮಾಣವಾಗಿದೆ. ಶಿರಕೋಳ ಹನಸಿ ನಡುವೆ 2 ಕಿಲೋ ಮೀಟರ್ ರಸ್ತೆ ಕೊಚ್ಚಿಕೊಂಡು ಹೋಗಿದ್ದು, ಇದರಿಂದ 22 ಕಿಲೋಮೀಟರ್ ನಷ್ಟು ಸುತ್ತಿಕೊಂಡು ಗ್ರಾಮಕ್ಕೆ ಬರಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ವಿದ್ಯಾರ್ಥಿಗಳ ಪರದಾಟ:
ರಸ್ತೆ ಕೊಚ್ಚಿಕೊಂಡು ಹೋಗಿರುವುದರಿಂದ ವಿದ್ಯಾರ್ಥಿಗಳು ಶಾಲಾ, ಕಾಲೇಜುಗಳಿಗೆ ಹೋಗದ ಪರಿಸ್ಥಿತಿ ಬಂದೊದಗಿದೆ. ಹಲವು ದಿನಗಳಿಂದ ಶಾಲಾ ಕಾಲೇಜುಗಳಿಗೆ ಹೋಗದೆ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಈ ಕುರಿತಂತೆ ಅಧಿಕಾರಿಗಳಿಗೆ ಮನವಿ ಮಾಡಿದರು ಏನು ಪ್ರಯೋಜನವಾಗಿಲ್ಲ.
ಇನ್ನು ಜಮೀನುಗಳ ಕೆಲಸ ಸಂಪೂರ್ಣ ನಿಂತಿದ್ದು, ಯಾವುದೇ ರೀತಿಯ ಕೃಷಿ ಚಟುವಟಿಗಳಿಗೆ ಅವಕಾಶವಿಲ್ಲದಂತಾಗಿದೆ. ಮೊದಲೇ ಕಳೆ ತುಂಬಿ ಇಡೀ ಬೆಳೆಗಳು ಹಾಳಾಗುತಿದ್ದು, ರೈತಾಪಿ ಜನರು ತಲೆ ಮೇಲೆ ಕೈ ಹೊತ್ತುಕೊಂಡು ಕೂತಿದ್ದಾರೆ. ತಾಲೂಕಿನ ಸುಮಾರು 7 ಸೇತುವೆಗಳು ಸಂಪೂರ್ಣ ಕೊಚ್ಚಿ ಹೋಗಿದ್ದು, ಯಾವುದೇ ರೀತಿಯ ಕೆಲಸ ಕಾರ್ಯಗಳಿಗೆ ಹೋಗದ ಸ್ಥಿತಿ ನಿರ್ಮಾಣವಾಗಿದೆ. ಇಷ್ಟೆಲ್ಲಾ ಅವಾಂತರ ಸೃಷ್ಟಿಯಾದ್ರೂ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳು ಬಾರದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹೋರಾಟದ ಹಾದಿ ಹಿಡಿಯಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.