ಹುಬ್ಬಳ್ಳಿ : ನಗರಕ್ಕೆ ನಗರವೇ ರಾಷ್ಟ್ರದ ಪ್ರಥಮ ಪ್ರಜೆಯ ಸ್ವಾಗತಕ್ಕೆ ಸಿದ್ಧವಾಗುತ್ತಿದೆ. ಎಲ್ಲೆಂದರಲ್ಲಿ ಬಣ್ಣ ಬಣ್ಣದ ಕಲಾಕೃತಿಗಳು ರಾರಾಜಿಸುತ್ತಿವೆ. ಈ ಎಲ್ಲ ಸಿದ್ಧತೆಯ ನಡುವೆ ಮಹಾನಗರ ಪಾಲಿಕೆ ಒಂದು ಎಡವಟ್ಟು ಮಾಡಿದೆ. ಕೆಲಸವೆಲ್ಲ ಮುಗಿದ ಮೇಲೆ ಪಾಲಿಕೆ ಕೊಟೇಶನ್ ಆಹ್ವಾನ ನೀಡಿದ್ದು, ಇದು ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯು ಮತ್ತೆ ಮುಜುಗರಕ್ಕೀಡಾಗುವಂತೆ ಮಾಡಿದೆ.
ಪೆಂಡಾಲ್ ಎಲ್ಲ ಹಾಕಿದ ಮೇಲೆ ಅದಕ್ಕಾಗಿ ಕೊಟೇಶನ್ ಕಳುಹಿಸುವಂತೆ ಕೋರಿ ಆಸಕ್ತರಿಂದ ಕೊಟೇಶನ್ ಆಹ್ವಾನಿಸಿ ಪತ್ರಿಕೆಗಳಿಗೆ ಜಾಹೀರಾತು ನೀಡಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಲ್ಲಿಗೆ ಆಗಮಿಸಲಿದ್ದಾರೆ. ಸೆ. 26ರಂದು ಮಹಾನಗರ ಪಾಲಿಕೆಯಿಂದ ಪೌರಸನ್ಮಾನ ಮಾಡಲಾಗುತ್ತಿದೆ. ಪಾಲಿಕೆಯಿಂದ ಪೌರಸನ್ಮಾನ ಸ್ವೀಕರಿಸಲಿರುವ 2ನೇ ರಾಷ್ಟ್ರಪತಿ ಇವರಾಗಿದ್ದು, ಮಹಾನಗರ ಜನತೆಗೆ ಹೆಮ್ಮೆಯ ವಿಷಯವಾಗಿದೆ.
ಕೆಲಸ ಮುಗಿದ ಮೇಲೆ ಕೊಟೇಶನ್ ಗೆ ಆಹ್ವಾನ : ಇದಕ್ಕಾಗಿ ಕಳೆದ ಒಂದು ವಾರದಿಂದಲೇ ಜಿಮ್ ಖಾನಾ ಮೈದಾನದಲ್ಲಿ ಭರ್ಜರಿಯಾಗಿ ತಯಾರಿ ನಡೆಯುತ್ತಿದೆ. ಮಳೆ, ಬಿಸಿಲಿನಿಂದ ಸಮಸ್ಯೆ ಆಗಬಾರದು ಎಂದು ಜರ್ಮನ್ ಟೆಕ್ನಿಕ್ ಬಳಸಿಕೊಂಡು ದೊಡ್ಡದಾದ ಪೆಂಡಾಲ್ ಹಾಕಲಾಗಿದೆ. ಅಲ್ಯುಮಿನಿಯಂ ಸಾಮಗ್ರಿಗಳಿಂದ ಈ ಟೆಂಟ್ ಹಾಕಲಾಗಿದ್ದು, ಸುಮಾರು 30 ಸಾವಿರ ಚದುರ ಅಡಿ ಪೆಂಡಾಲ್ ಹಾಕಲಾಗಿದೆ.
ಕಾರ್ಯಕ್ರಮಕ್ಕಾಗಿ 3200 ಚದುರ ಅಡಿ ಅಳತೆಯ ವೇದಿಕೆ ಸಿದ್ಧಪಡಿಸಲಾಗಿದೆ. 5 ಸಾವಿರ ಕುರ್ಚಿಗಳನ್ನು ಟೆಂಟ್‌ನೊಳಗೆ ಜೋಡಿಸುವ ಕೆಲಸ ನಡೆದಿದೆ. ಬಹುತೇಕ ಎಲ್ಲ ತಯಾರಿ ಕೂಡ ಮುಗಿದಿದ್ದು, ಆದರೆ ಪಾಲಿಕೆ ಕೆಲಸ ಮುಗಿದ ಮೇಲೆ ಕೊಟೇಶನ್ ಗೆ ಆಹ್ವಾನ ನೀಡಿದೆ.
ಇನ್ನು ಪೆಂಡಾಲ್, ಟೆಂಟ್, ಕುರ್ಚಿ ಅಳವಡಿಕೆ ಸೇರಿದಂತೆ ಎಲ್ಲ ಕೆಲಸಗಳು ಮುಗಿದ ನಂತರ ಕೊಟೇಶನ್ ಕಳುಹಿಸಿ, ಅದು 24 ಗಂಟೆಯೊಳಗೆ ಪಾಲಿಕೆ ಕಚೇರಿಗೆ ಮುಟ್ಟಿಸಿ ಎಂದು ಪಾಲಿಕೆ ಅರ್ಜಿ ಆಹ್ವಾನಿಸಿದೆ. ಈಗಾಗಲೇ ಎಲ್ಲ ಕೆಲಸಗಳು ಪೂರ್ಣಗೊಂಡಿದ್ದು, ಕೊಟೇಶನ್ ಕೇಳಿದ್ದು ಯಾವ ಉದ್ದೇಶಕ್ಕೆ? ಎಂಬುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಕಾಟಾಚಾರಕ್ಕೆ ಕರೆದಿರುವ ಕೊಟೇಶನ್ : ಇದು ಕಾಟಾಚಾರಕ್ಕೆ ಕರೆದಿರುವ ಕೊಟೇಶನ್. ಸರ್ಕಾರಕ್ಕೆ ಕೊಟೇಶನ್ ಪಡೆದುಕೊಂಡೇ ಪೆಂಡಾಲ್ ಹಾಕಲು ಏಜೆನ್ಸಿ ಗೊತ್ತು ಮಾಡಿದ್ದೇವೆ ಎಂದು ತೋರಿಸುವ ಪ್ರಯತ್ನ. ತಮಗೆ ಬೇಕಾದವರಿಗೆ ಕೆಲಸ ಕೊಟ್ಟು ಅವರಿಂದಲೇ ಕೊಟೇಶನ್ ಪಡೆದು ಅವರಿಗೆ ಕೊಟ್ಟಿದ್ದೇವೆ ಎಂದು ತೋರಿಸಲು ಮಾಡುವ ಪ್ರಯತ್ನವೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಒಟ್ಟಿನಲ್ಲಿ ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಅವಳಿನಗರ ಇಂತಹದೊಂದು ನಗೆಪಾಟಲಿಗೆ ಗುರಿಯಾಗಿದೆ. ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಮುಚ್ಚುವ ರೀತಿಯಲ್ಲಿ ಕೆಲಸವೆಲ್ಲ ಪೂರ್ಣಗೊಂಡ ಮೇಲೆ ಕೋಟೆಶನ್ ಆಹ್ವಾನ ನೀಡಿರುವುದು ವಿಪರ್ಯಾಸ.
ಇದನ್ನೂ ಓದಿ : ರಾಜಕಾರಣಿಗಳು ಭ್ರಷ್ಟರಲ್ಲ, ವ್ಯವಸ್ಥೆ ನಮ್ಮನ್ನು ಕೆಡಿಸ್ತಿದೆ: ಸಚಿವ ಮಾಧುಸ್ವಾಮಿ