ಧಾರವಾಡ : ಭಾರತೀಯ ಇತಿಹಾಸದಲ್ಲಿ ಐತಿಹಾಸಿಕ ದಿನವಾಗಿರುವ ಆಗಸ್ಟ್ 9ರ ಕ್ವಿಟ್ ಇಂಡಿಯಾ ಚಳವಳಿ ಅಂಗವಾಗಿ ರಾಷ್ಟ್ರಪತಿಗಳು ಧಾರವಾಡ ಜಿಲ್ಲೆಯ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರಿಗೆ ತಮ್ಮ ಕಚೇರಿಯಿಂದ ಶಾಲು, ಹಾರ ಮತ್ತು ಸಂದೇಶ ಪತ್ರಗಳನ್ನು ಅವರಿಗೆ ತಲುಪಿಸಿ ಗೌರವಿಸಲು ಜಿಲ್ಲಾಧಿಕಾರಿಗಳ ಕಚೇರಿಗೆ ಕಳುಹಿಸಿದ್ದರು.
ರಾಷ್ಟ್ರಪತಿಗಳ ಸಂದೇಶದೊಂದಿಗೆ ಜಿಲ್ಲಾಧಿಕಾರಿಗಳ ಪ್ರತಿನಿಧಿಯಾಗಿ ಉಪವಿಭಾಗಾಧಿಕಾರಿ ಮಹ್ಮದ ಜುಬೇರ ಅವರು, ಹುಬ್ಬಳ್ಳಿಯ ಉಣಕಲ್ ಗ್ರಾಮದ ಟೀಚರ್ಸ್ ಕಾಲೋನಿಯಲ್ಲಿರುವ ಸ್ವಾತಂತ್ರ್ಯ ಯೋಧ ಶ್ರೀರಾಮ ವಿಷ್ಣುಕಾಂತ ತೆಂಬೆ (99) ಮತ್ತು ಜಿಲ್ಲೆಯ ಮೊರಬ ಗ್ರಾಮದ ನೂರ್ ಅಹ್ಮದ ನದಾಫ್ ಅವರನ್ನು ಭೇಟಿಯಾದರು.
ಕ್ವಿಟ್ ಇಂಡಿಯಾ ಚಳವಳಿಯ ವಾರ್ಷಿಕೋತ್ಸವ ಅಂಗವಾಗಿ ಭಾರತ ಸರ್ಕಾರ, ರಾಷ್ಟ್ರಪತಿ ಭವನದಿಂದ ಸ್ವಾತಂತ್ರ್ಯ ಯೋಧರಿಗೆ ಸನ್ಮಾನ ಮಾಡಲು ನೀಡಿದಂತಹ ಅಂಗವಸ್ತ್ರ, ಶಾಲು ಹಾಗೂ ಅಭಿನಂದನಾ ಪತ್ರಗಳನ್ನು ನೀಡಿ, ರಾಷ್ಟ್ರಪತಿಗಳ ಪರವಾಗಿ ಸನ್ಮಾನಿಸಿ, ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಿಷ್ಣುಕಾಂತ ತೆಂಬೆ ಅವರ ಧರ್ಮಪತ್ನಿ, ಮಕ್ಕಳು ಹಾಗೂ ನೂರ್ ಅಹ್ಮದ ನದಾಫ ಅವರ ಮಗಳು ಸೇರಿದಂತೆ ಅವರ ಕುಟುಂಬ ಸದಸ್ಯರು, ಕಂದಾಯ ಇಲಾಖೆ ವಿವಿಧ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.