ಧಾರವಾಡ: ನಗರದ ಹೆಬ್ಬಳ್ಳಿ ಅಗಸಿ ಸಮೀಪದ ನವಲಗುಂದ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸಾರಾಯಿ ಅಂಗಡಿಯನ್ನು ಶೀಘ್ರವಾಗಿ ಬಂದ್ ಮಾಡುವಂತೆ ಆಗ್ರಹಿಸಿ ನಡೆಯುತ್ತಿದ್ದ ಪ್ರತಿಭಟನೆ ಇಂದು ಕೂಡಾ ಮುಂದುವರೆದಿದೆ.
ಇಂದು ಟ್ರ್ಯಾಕ್ಟರ್ ಸಮೇತ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಸ್ಥಳೀಯರು, ಟೈರ್ಗೆ ಬೆಂಕಿ ಹಚ್ಚಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಅಲ್ಲದೇ ಬಾರ್ ಮಾಲೀಕರು ಮತ್ತು ಅನುಮತಿ ನೀಡಿದ ಅಧಿಕಾರಿಗಳ ವಿರುದ್ಧ ದಿಕ್ಕಾರ ಕೂಗಿದರು.
ಸ್ಥಳೀಯರ ವಿರೋಧದಂತೆ ಬಾರ್ ಅಂಗಡಿಯನ್ನು ಬಂದ್ ಮಾಡಲಾಗಿತ್ತು. ಆದರೆ, ಏಕಾಏಕಿ ಬಾರ್ ಪ್ರಾರಂಭವಾಗಿದ್ದರ ವಿರುದ್ಧ ನಿನ್ನೆ ಸ್ಥಳೀಯರು ಪ್ರತಿಭಟನೆ ನಡೆಸಿದ್ದರು. ಸಾರಾಯಿ ಅಂಗಡಿ ಸಮೀಪವೇ ಎರಡು ಅಂಗನವಾಡಿ, ಶಾಲೆ ಹಾಗೂ ಎರಡು ದೇವಸ್ಥಾನಗಳಿದ್ದು, ಬಾರ್ ಬಂದ್ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಜಿಲ್ಲೆಯ ಈ ಪ್ರದೇಶದಲ್ಲಿ ಯಾವುದೇ ಬಾರ್ ಇರಲಿಲ್ಲ. ಬಾರ್ಗೆ ಅನುಮತಿ ನೀಡುವಾಗ ಸ್ಥಳೀಯರ ಸಮ್ಮತಿ ಕೇಳಿಲ್ಲ. ಇದೊಂದು ಅನಧಿಕೃತ ಕಟ್ಟಡವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಸಾರ್ವಜನಿಕರ ಸಂಪೂರ್ಣ ವಿರೋಧ ಗಮನಿಸದೇ ಅಬಕಾರಿ ಇಲಾಖೆ ಬಾರ್ ಮುಂದುವರೆಸುವುದು ಮಾನವ ಹಕ್ಕು ಉಲ್ಲಂಘನೆಯಾಗಿದೆ ಎಂದು ಜಿಲ್ಲಾಧಿಕಾರಿಗಳ ಮೂಲಕ ಮಾನವ ಹಕ್ಕು ಆಯೋಗ ಹಾಗೂ ಮಹಿಳಾ ಹಕ್ಕುಗಳ ಆಯೋಗ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು.