ಧಾರವಾಡ: ದೆಹಲಿಯಲ್ಲಿ ನಡೆದ ರೈತ ಹೋರಾಟ ಬೆಂಬಲಿಸಿ ಹಾಗೂ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ವಿರೋಧಿಸಿ ಅಖಂಡ ಕರ್ನಾಟಕ ರೈತ ಸಂಘದಿಂದ ರೈತರು ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.
ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿರುವ ರೈತರು, ಎಪಿಎಂಸಿ ಹಾಗೂ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ಪಂಜಾಬ್ ಹಾಗೂ ಹರಿಯಾಣದ ರೈತರು ಧರಣಿ ನಡೆಸುತ್ತಿದ್ದಾರೆ. ಆದರೆ, ಸಮಸ್ಯೆ ಬಗೆಹರಿಸಬೇಕಾಗಿರುವ ಕೇಂದ್ರ ಸರ್ಕಾರ ಮಾತ್ರ ರೈತರ ಮೇಲೆ ಜಲ ಫಿರಂಗಿ ಹಾಗೂ ಟಿಯರ್ ಗ್ಯಾಸ್ ಸಿಡಿಸುವ ಮೂಲಕ ದೌರ್ಜನ್ಯ ಎಸಗುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಕೇಂದ್ರ ಮಾಜಿ ಸಚಿವ ಬಾಬಾಗೌಡ ಪಾಟೀಲ್ ಮಾತನಾಡಿ, ಕೇಂದ್ರ ಸರ್ಕಾರ ಸರ್ವಾಧಿಕಾರಿ ಧೋರಣೆ ನಡೆಸುತ್ತಿದೆ. ಈ ದೇಶವನ್ನು ಎಂಎನ್‌ಸಿ ಕಂಪನಿಗಳಿಗೆ ಖರೀದಿ ಕೊಟ್ಟಂತೆ ನಡೆದುಕೊಳ್ಳುತ್ತಿದೆ. ರಾಜ್ಯ ಮಟ್ಟದಲ್ಲಿ ಚರ್ಚೆಸದೆ ಕೃಷಿ ಕಾನೂನುಗಳನ್ನು ತರಲಾಗುತ್ತಿದೆ. ಈ ಕಾನೂನುಗಳನ್ನು ನಾವು ಒಪ್ಪುವುದಿಲ್ಲ ಎಂದು ಹರಿಹಾಯ್ದರು.
ಇನ್ನೂ ಕೃಷಿ ಸಚಿವ ಬಿ.ಸಿ.ಪಾಟೀಲರ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಹೇಡಿಗಳು ಯಾರು ಅಂತಾ ಅವರೇ ಆತ್ಮಾವಲೋಕನ ಮಾಡಿಕೊಳ್ಳಲಿ. ಹೇಡಿಗಳು ರೈತರೋ? ಅಥವಾ ಮಂತ್ರಿ ಸ್ಥಾನಕ್ಕಾಗಿ ಜನ್ಮ ಕೊಟ್ಟ ತಂದೆ-ತಾಯಿಗೆ ಅವಮಾನ ಮಾಡಿದವರು, ಕುರ್ಚಿಗಾಗಿ ರಾಜೀನಾಮೆ ಕೊಟ್ಟವರೋ? ಎಂದು ಆಕ್ರೋಶ ವ್ಯಕ್ತಪಡಿಸಿದರು.