ಹುಬ್ಬಳ್ಳಿ: ಕಾಡುಗಳ ನಾಶ ಹಾಗೂ ಅತಿಕ್ರಮಣದಿಂದ ಪ್ರಾಣಿಗಳು ಹಾಗೂ ಮಾನವನ ನಡುವಿನ ಸಂಘರ್ಷ ಹೆಚ್ಚಾಗುತ್ತಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದ್ರು.
ವಿದ್ಯಾನಗರದ ಕೆಎಲ್‍ಇ ಬಿ. ವಿ. ಭೂಮರೆಡ್ಡಿ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಧಾರವಾಡ ಅರಣ್ಯ ವಿಭಾಗ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ, ವನ್ಯಜೀವಿಗಳ ಸಂರಕ್ಷಣೆಗಾಗಿ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರತಿದಿನ ಸಾಮಾಜಿಕ ಜಾಲತಾಣ, ಫೇಸ್ಬುಕ್, ವಾಟ್ಸ್ಯಾಪ್‍ಗಳಲ್ಲಿ ಕಾಡು ಪ್ರಾಣಿಗಳು ಮತ್ತು ಮಾನವನ ನಡುವಿನ ಸಂಘರ್ಷದ ಸುದ್ದಿಗಳನ್ನು ನೋಡುತ್ತೇವೆ. ಇದಕ್ಕೆ ಕಾರಣ ಅರಣ್ಯ ನಾಶ ಎಂದರು.
![Dharwad district news](https://etvbharatimages.akamaized.net/etvbharat/prod-images/kn-hbl-03-wildlife-week-7208089_03102019100248_0310f_1570077168_1018.jpg)
ಇಂದು ಅನೇಕ ಕೀಟಗಳು, ಹಕ್ಕಿ ಹಾಗೂ ಪ್ರಾಣಿಗಳು ಅಳಿದು ಹೋಗಿವೆ. ಇನ್ನೂ ಕೆಲವು ಅಳಿವಿನಂಚಿನಲ್ಲಿವೆ. ಪ್ರಾಣಿಗಳ ಆವಾಸಗಳನ್ನು ನಾಶ ಮಾಡದೆ, ಶಾಂತಿಯಿಂದ ಮಾನವರು ಹಾಗೂ ಪ್ರಾಣಿಗಳು ಸಹಬಾಳ್ವೆಯಿಂದ ಜೀವಿಸುವಂತೆ ಆಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಡು ಪ್ರಾಣಿಗಳ ಕುರಿತಾದ ಘೋಷಣೆಯೊಂದಿಗೆ, ಬಿತ್ತಿ ಪತ್ರಗಳನ್ನು ಹಿಡಿದ ಸುಮಾರು 1500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ನಡಿಗೆಯಲ್ಲಿ ಭಾಗವಹಿಸಿದ್ದರು. ಬಿ.ವಿ.ಬಿ ತಾಂತ್ರಿಕ ಮಹಾವಿದ್ಯಾಲಯ, ಹೊಸೂರು ಬಿ.ಆರ್.ಟಿ.ಎಸ್. ಬಸ್ ನಿಲ್ದಾಣದವರೆಗೆ ಸಾಗಿದ ಜಾಥ, ಮರಳಿ ಬಿ.ವಿ.ಬಿ ತಾಂತ್ರಿಕ ಮಹಾವಿದ್ಯಾಲಯಕ್ಕೆ ಬಂದು ಸಮಾಪ್ತಿಯಾಯಿತು.
![Dharwad district news](https://etvbharatimages.akamaized.net/etvbharat/prod-images/kn-hbl-03-wildlife-week-7208089_03102019100248_0310f_1570077168_394.jpg)
ಗಮನಸೆಳೆದ ಬೀದಿ ನಾಟಕ
ಅರಣ್ಯ ಅಕಾಡೆಮಿಯ ಶಿಕ್ಷಣಾರ್ಥಿಗಳು ಪ್ರಸ್ತುತಪಡಿಸಿದ ವನ್ಯಜೀವಿಗಳ ಅಳಿವಿನ ಕುರಿತಾದ ಬೀದಿ ನಾಟಕ ಗಮನ ಸೆಳೆಯಿತು. ಗುಬ್ಬಿ, ಪಶ್ಚಿಮ ಘಟ್ಟದಲ್ಲಿ ಕಂಡುಬರುವ ಮಂಗಟ್ಟೆ (ಹಾರ್ನ್‍ಬಿಲ್), ಕೃಷ್ಣಮೃಗಗಳು ರಾಜ್ಯದಲ್ಲಿ ಅಳಿವಿನಂಚಿನಲ್ಲಿವೆ ಎಂಬುದನ್ನು ನಾಟಕದ ಮೂಲಕ ಸಾದರಪಡಿಸಲಾಯಿತು.