ಹುಬ್ಬಳ್ಳಿ: ಆನ್‌ಲೈನ್ ತರಗತಿಗಳನ್ನು ಈಗಾಗಲೇ ಶಾಲಾ-ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಆರಂಭಿಸಲಾಗಿದೆ. ಆದ್ರೆ ಆನ್‌ಲೈನ್ ಕ್ಲಾಸ್ಗಳು ವಿದ್ಯಾರ್ಥಿಗಳು ಹಾಗೂ ಮಕ್ಕಳ ಮೇಲೆ ಎಷ್ಟು ಪರಿಣಾಮ ಬೀರುತ್ತದೆಯೋ ಅಷ್ಟೇ ಪರಿಣಾಮ ಪ್ರಾಧ್ಯಾಪಕರ ಮೇಲೂ ಬೀರುತ್ತದೆ. ಇದರಿಂದ ಖಾಸಗೀತನಕ್ಕೆ ಧಕ್ಕೆಯಾಗಲಿದೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ಕೊರೊನಾ ಮಹಾಮಾರಿಯಿಂದ ಮಕ್ಕಳು ಅಮೂಲ್ಯವಾದ ಶಿಕ್ಷಣದಿಂದ ವಂಚಿತರಾಗುವುದು ಸಮಂಜಸವಲ್ಲ ಎಂಬುದು ಕೆಲ ಪೋಷಕರ ಅಭಿಮತವೂ ಆಗಿದೆ. ಆದ್ರೆ ಆನ್‌ಲೈನ್ ತರಗತಿಗೆ ಭಾರತ ತಯಾರಾಗಿಲ್ಲ. ಈಗಲೂ ಅನೇಕ ಕಡೆ ಸೂಕ್ತ ಇಂಟರ್ನೆಟ್ ಸೌಕರ್ಯವಿಲ್ಲ. ಕೆಲವು ಪ್ರದೇಶದಲ್ಲಿ ಮನೆಯ ಒಳಗಡೆ ಮೊಬೈಲ್ ಕಾಲ್ ಕೂಡ ಸಿಗುವುದಿಲ್ಲ. ಹಳ್ಳಿಗಳಲ್ಲಿ ಇಂಟರ್ನೆಟ್ ಸೌಲಭ್ಯವಿಲ್ಲ. ಬಡ ವರ್ಗದ ಪೋಷಕರಿಗೆ ಈ ಆನ್‌ಲೈನ್ ಶಿಕ್ಷಣ ಈಗಲೂ ಕಬ್ಬಿಣದ ಕಡಲೆಯಾಗಿದೆ. ಉಳ್ಳವರು ಹೇಗಾದರೂ ಮಾಡಿ ತಮ್ಮ ಮಕ್ಕಳಿಗೆ ಮೊಬೈಲ್, ಲ್ಯಾಪ್ ಟಾಪ್, ಇಂಟರ್ನೆಟ್ ವ್ಯವಸ್ಥೆ ಮಾಡಿಕೊಡುತ್ತಾರೆ. ಆದರೆ ಬಡವರ ಗತಿಯೇನು?. ಈಗಾಗಲೇ ಅನೇಕ ಶಾಲಾ ಕಾಲೇಜುಗಳಲ್ಲಿ ಮೊಬೈಲ್ ಬಳಕೆ ಪೂರ್ಣ ನಿಷಿದ್ಧವಾಗಿತ್ತು. ಆದರೆ ಇಂದು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನಾವೇ ಬಲವಂತವಾಗಿ ಮಕ್ಕಳ ಕೈಗೆ ಮೊಬೈಲ್ ನೀಡುವ ಸ್ಥಿತಿ ನಿರ್ಮಾಣವಾಗಿದೆ. ಇದರ ದೂರಗಾಮಿ ದುಷ್ಪರಿಣಾಮಗಳ ಕುರಿತಾಗಿ ಸರ್ಕಾರಕ್ಕಾಗಲೀ, ಪೋಷಕರಿಗಾಗಲೀ ಚಿಂತೆ ಇದ್ದಂತಿಲ್ಲ.
ಕ್ಲಾಸ್ ನಡೆಯುತ್ತಿರುವ ಸಂದರ್ಭದಲ್ಲಿ ಬರುವ ಇತರ ಕರೆಯಿಂದ ಅನೇಕ ಸಲ ಆನ್‌ಲೈನ್ ಕ್ಲಾಸ್ಗೆ ಅಡಚಣೆಯಾಗುವ ಸಾಧ್ಯತೆ ಇದೆ. ಚಿಕ್ಕ ಮಕ್ಕಳ ಆನ್‌ಲೈನ್ ಕ್ಲಾಸ್ ಸಂದರ್ಭದಲ್ಲಿ ಮಕ್ಕಳೊಂದಿಗೆ ಪೋಷಕರು ಇರಲೇಬೇಕಾದ ಪರಿಸ್ಥಿತಿ ಇದೆ. ಇಲ್ಲವಾದರೆ ಮಕ್ಕಳು ಅನ್ಯ ಮಾರ್ಗ ತುಳಿಯುವ ಆತಂಕವಿದೆ.
ಆನ್‌ಲೈನ್ ತರಗತಿಗಳಿಂದ ಮಹಿಳಾ ಕಾಲೇಜು ಮತ್ತು ವಿಶ್ವವಿದ್ಯಾಲಯ ಶಿಕ್ಷಕರ ಗೌಪ್ಯತೆಗೆ ಧಕ್ಕೆಯಾಗುತ್ತಿದೆ. ಎಷ್ಟೋ ಪ್ರಾಧ್ಯಾಪಕರು ತಮ್ಮ ಮೊಬೈಲ್ ನಂಬರ್ ಕೊಟ್ಟಿರುವುದಿಲ್ಲ. ಆನ್‌ಲೈನ್ ತರಗತಿಗಾಗಿ ನಂಬರ್ ಶೇರ್ ಮಾಡಿದ್ರೆ, ಅವರ ನಂಬರಿಗೆ ಬೇಕಾಬಿಟ್ಟಿ ಕರೆಗಳು, ಮೆಸ್ಸೇಜ್ಗಳು, ವಿಡಿಯೋಗಳನ್ನು ಕಳುಹಿಸಿ ಮಾನಸಿಕ ಹಿಂಸೆ ನೀಡುವ ಆತಂಕ ಇದೆ. ಇನ್ನು ಪ್ರಾಧ್ಯಾಪಕರು ಹಾಗೂ ಶಿಕ್ಷಕರ ತಮ್ಮ ಖಾಸಗಿ ಜೀವನಕ್ಕೆ ಧಕ್ಕೆಯಾಗುತ್ತಿದೆ. ಹಲವು ವಿದ್ಯಾರ್ಥಿಗಳು ಆನ್‌ಲೈನ್ ತರಗತಿಯಲ್ಲಿ ತಿಳಿಯದ ವಿಷಯವನ್ನು ಫೋನ್ ಮಾಡಿಕೇಳುತ್ತಾರೆ. ಇದರಿಂದ ಕಿರಿಕಿರಿ ಅನುಭವಿಸುವಂತಾಗುತ್ತಿದೆ.
ಆನ್‌ಲೈನ್ ತರಗತಿಗಳಿಂದ ಸಾಧಕಗಳಿಗಿಂತ ಬಾಧಕಗಳು ಹೆಚ್ಚಾಗಿದ್ದು, ಸರ್ಕಾರ ಆನ್‌ಲೈನ್ ತರಗತಿಗಳಿಗೆ ಮುಕ್ತಿ ನೀಡುವುದು ಉತ್ತಮ ಎಂಬ ಅಭಿಪ್ರಾಯ ಪ್ರಾಧ್ಯಾಪಕರ ವಲಯದಿಂದ ವ್ಯಕ್ತವಾಗುತ್ತಿದೆ.