ಹುಬ್ಬಳ್ಳಿ : ನಗರದ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯ ಫೋಟೋಗಳನ್ನು ಅಸಭ್ಯವಾಗಿ ಇನ್ಸ್ಟ್ರಾಗ್ರಾಂನಲ್ಲಿ ಫೋಸ್ಟ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಈ ಇಬ್ಬರು ಸೇರಿ ಬಂಧಿತರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ಅದೇ ಕಾಲೇಜಿನ ದ್ವಿತೀಯ ಬಿಕಾಂ ಓದುತ್ತಿರುವ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಇದೇ ಕಾಲೇಜಿನ ವಿದ್ಯಾರ್ಥಿಯೊಬ್ಬನನ್ನು ಪೊಲೀಸರು ಬಂಧಿಸಿದ್ದರು. ಈತನ ಮಂಪರು ಪರೀಕ್ಷೆ ಮಾಡಿದಾಗ ಇವರಿಬ್ಬರ ಹೆಸರನ್ನು ಬಾಯಿಬಿಟ್ಟಿದ್ದ. ಹೀಗಾಗಿ ಪೊಲೀಸರು ಈ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಮೂವರಲ್ಲಿ ಓರ್ವ ವಿದ್ಯಾರ್ಥಿ ಹ್ಯಾಕರ್ ಆಗಿದ್ದಾನೆ. ಮಾಸ್ಟರ್ ಮೈಂಡ್ ವಿದ್ಯಾರ್ಥಿಯ ಕೈಚಳಕದಿಂದಲೇ ಹುಡುಗಿಯರ ಅಕೌಂಟ್ ಹ್ಯಾಕ್ ಮಾಡಿ ಫೋಟೋಗಳನ್ನು ಅಸಭ್ಯವಾಗಿ ಎಡಿಟ್ ಮಾಡಿ ಇನ್ಸ್ಟಾಗ್ರಾಂನಲ್ಲಿ ಹರಿ ಬಿಡುತ್ತಿದ್ದರು. ಹ್ಯಾಕರ್ ವಿದ್ಯಾರ್ಥಿಗೆ ಮತ್ತಿಬ್ಬರು ವಿದ್ಯಾರ್ಥಿಗಳು ಸಾಥ್ ನೀಡುತ್ತಿದ್ದರು.
ಪ್ರಕರಣದ ದಿಕ್ಕು ತಪ್ಪಿಸಲು ಈ ಬಂಧಿತ ವಿದ್ಯಾರ್ಥಿಗಳು ಫೇಕ್ ಅಕೌಂಟ್ ಕ್ರಿಯೇಟ್ ಮಾಡಿದ್ದರು. ಎಡಿಟ್ ಮಾಡಿದ ಫೋಟೋಗಳ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುತ್ತಿದ್ದರು. ಅಷ್ಟೇ ಅಲ್ಲ ಈ ವಿದ್ಯಾರ್ಥಿಗಳು ಪೊಲೀಸರ ಹಾದಿ ತಪ್ಪಿಸಲು ಬೇರೆ ಬೇರೆ ತಂತ್ರಗಳನ್ನು ರೂಪಿಸುತ್ತಿದ್ದರು ಎಂಬುದು ತಿಳಿದು ಬಂದಿದೆ. ಮೂವರನ್ನೂ ಬಂಧಿಸಿದ ಪೊಲೀಸರು ಪ್ರತಿಯೊಂದು ಆಯಾಮದಲ್ಲಿ ತನಿಖೆ ನಡೆಸುತ್ತಿದ್ದಾರೆ. ಬಳಿಕ ನ್ಯಾಯಾಲಯಕ್ಕೆ ಹಾಜರಿ ಪಡಿಸಿರುವ ಪೊಲೀಸರು ಆರೋಪಿಗಳನ್ನು ಕಸ್ಟಡಿಗೆ ಪಡೆಯಲಿದ್ದಾರೆ.
ಓದಿ: ಹುಬ್ಬಳ್ಳಿ ಕಾಲೇಜು ವಿದ್ಯಾರ್ಥಿನಿಯರ ಅಸಭ್ಯ ಫೋಟೋ ಪೋಸ್ಟ್ ಪ್ರಕರಣ: ಆರೋಪಿ ಬಂಧನ
ಪೊಲೀಸ್ ಕಮೀಷನರ್ ಹೇಳಿಕೆ: ನಗರದ ಖಾಸಗಿ ಕಾಲೇಜು ವಿದ್ಯಾರ್ಥಿನಿಯರನ್ನು ಅಸಭ್ಯವಾಗಿ ಬಿಂಬಿಸುವಂತಹ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿರುವ ಘಟನೆ ಇತ್ತೀಚೆಗೆ ನಡೆದಿತ್ತು. ಈ ಸಂಬಂಧ, ಅದೇ ಕಾಲೇಜಿನ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ ಎಂದು ಹುಬ್ಬಳ್ಳಿ - ಧಾರವಾಡ ಪೊಲೀಸ್ ಕಮೀಷನರ್ ಸಂತೋಷ ಬಾಬು ಮಾಹಿತಿ ನೀಡಿದ್ದರು.
ಆಗಸ್ಟ್ 9ರಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆರೋಪಿ ವಿದ್ಯಾರ್ಥಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಬಂಧಿತನ ಇ - ಮೇಲ್ ಐಡಿ ಮತ್ತು ಸಾಮಾಜಿಕ ಜಾಲತಾಣಗಳ ವಿವರಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಈ ವರದಿ ಬಳಿಕವೇ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳೆಷ್ಟು ಎಂದು ತಿಳಿದು ಬರಲಿದೆ. ಪ್ರಾಥಮಿಕ ತನಿಖೆಯಲ್ಲಿ ಈತನೊಂದಿಗೆ ಇನ್ನೂ ಕೆಲವರಿದ್ದಾರೆ ಎಂಬ ಶಂಕೆ ಇದೆ. ಇದೇ ಆಧಾರದ ಮೇಲೆ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದರು. ಈಗ ಪೊಲೀಸರು ಮತ್ತಿಬ್ಬರನ್ನು ಬಂಧಿಸಿದ್ದು, ಪ್ರಕರಣದ ತನಿಖೆ ಚುರುಕುಗೊಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ : ಆರೋಪಿ ಇಸ್ಟಾಗ್ರಾಂನಲ್ಲಿ ನಕಲಿ ಖಾತೆ ಸೃಷ್ಟಿಸಿ ಕಾಲೇಜಿನ ನಾಲ್ವರು ವಿದ್ಯಾರ್ಥಿನಿಯರನ್ನು ಅಸಭ್ಯವಾಗಿ ಬಿಂಬಿಸುವಂತಹ ಫೋಟೋಗಳನ್ನು ಫೋಸ್ಟ್ ಮಾಡಿದ್ದ. ವಿದ್ಯಾರ್ಥಿನಿಯರು ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಕಾಲೇಜಿನ ಎಲ್ಲ ವಿದ್ಯಾರ್ಥಿಗಳನ್ನು ವಿಚಾರಣೆ ನಡೆಸಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಇನ್‌ಸ್ಟಾಗ್ರಾಂನಿಂದಲೂ ವರದಿ ಕೇಳಲಾಗಿತ್ತು.