ಧಾರವಾಡ: ಜಿಲ್ಲೆಯು ಕರ್ನಾಟಕದಲ್ಲಿ ಕೇಂದ್ರ ಸ್ಥಾನದಲ್ಲಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣದ ಜತೆಗೆ ಒಳ್ಳೆಯ ರಸ್ತೆ ಮಾರ್ಗಗಳಿವೆ. ಈ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲು ಆದ್ಯತೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು.
ಧಾರವಾಡ ರಂಗಾಯಣದ ಆವರಣದಲ್ಲಿ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗೋವಾ ರಾಜ್ಯಕ್ಕೆ ಹೋದ್ರೆ ಬೀಚ್ಗಳು ಸಿಗುತ್ತವೆ. ರಾಜಸ್ಥಾನದಲ್ಲಿ ಅರಮನೆಗಳಿವೆ, ನಮ್ಮ ಕರ್ನಾಟಕ ರಾಜ್ಯದಲ್ಲಿ ಹಲವಾರು ಪ್ರವಾಸಿ ತಾಣಗಳಿಗೆ ಹಂಪಿ, ಬಾದಾಮಿ, ಐಹೊಳೆ, ಪಟ್ಟದಕಲ್ಲು, ಚಾಲುಕ್ಯರ ಹಳೆಬೀಡು, ಬೇಲೂರು, ಶಿವಮೊಗ್ಗ, ಧಾರವಾಡ ಮಲೆನಾಡು ಹೆಬ್ಬಾಗಿಲು ಎನ್ನಲಾಗುತ್ತದೆ. ಹೀಗೆ ಹತ್ತು ಹಲವಾರು ಪ್ರವಾಸಿ ತಾಣಗಳು ನಮ್ಮ ರಾಜ್ಯದಲ್ಲಿವೆ ಎಂದರು.
ನಮ್ಮ ಧಾರವಾಡ ಜಿಲ್ಲೆಯಲ್ಲಿ ಉತ್ತಮ ಹವಾಮಾನ ಇದೆ. ಕಲಘಟಗಿ, ಅಳ್ನಾವರದಲ್ಲಿ ಮಲೆನಾಡು ಸ್ಥಳಗಳಿವೆ. ಜಿಲ್ಲಾಡಳಿತ ಒಂದು ಟಾಸ್ಕ್ ಫೋರ್ಸ್ ರಚಿಸಿ ಜಿಲ್ಲೆಗೆ ಪ್ರವಾಸಿ ತಾಣಗಳ ಅಭಿವೃದ್ಧಿಗೆ ರೂಪುರೇಷೆ ಹಾಕಲಾಗುವುದು. ಜಿಲ್ಲೆಯಲ್ಲಿ ಒಂದೆರಡು ದಿನ ಅಥವಾ ಒಂದು ವಾರ ಕಾಲ ವೀಕ್ಷಿಸಬಹುದಾದ ಜಿಲ್ಲೆಯ ಪ್ರವಾಸಿ ತಾಣಗಳ ಸಂಪೂರ್ಣ ಮಾಹಿತಿಯನ್ನು ವೆಬ್ ಸೈಟಿನಲ್ಲಿ ಅಳವಡಿಸಲು ಕ್ರಮವಹಿಸಲಾಗುವುದು ಎಂದರು.
ಕೃಷಿ ಕಡೆ ಹೆಚ್ಚಿನ ಒತ್ತು ನೀಡುವುದರಿಂದ ಉತ್ತಮ ಆಹಾರ ಸೇವಿಸಿ ಆರೋಗ್ಯಕರವಾಗಿರಬಹುದು. ಹೊರ ರಾಜ್ಯದ ಜನರು ಗ್ರಾಮೀಣ ಸೊಗಡು ನೋಡಲು ನಮ್ಮ ರಾಜ್ಯಕ್ಕೆ ಬರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಜಿಲ್ಲಾಡಳಿತದಿಂದ ಹೋಮ್ ಸ್ಟೇಗಳನ್ನು ಮಾಡಿ ಹೆಚ್ಚಿನ ಅಭಿವೃದ್ಧಿ ಪಡಿಸಿ, ಉತ್ತೇಜಿಸಲಾಗುತ್ತದೆ ಎಂದರು. ವಿಶೇಷ ಆಹ್ವಾನಿತರಾದ ನೇಚರ್ ಫಸ್ಟ್ ಇಕೋ ವಿಲೇಜ್ ಸಂಸ್ಥಾಪಕರಾದ ಪಿ ವಿ ಹಿರೇಮಠ ಅವರು, ಪ್ರವಾಸೋದ್ಯಮ ಮತ್ತು ಗ್ರಾಮೀಣಾಭಿವೃದ್ಧಿ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.