ಧಾರವಾಡ : ಕಾಂಗ್ರೆಸ್ ಸರಕಾರ ತಾನು ಘೋಷಣೆ ಮಾಡಿದ್ದ ಐದು ಸುಳ್ಳು ಉಚಿತ ಗ್ಯಾರಂಟಿಗಳಿಗೆ ಹೊಸ ಹೊಸ ಷರತ್ತು ಹಾಕುತ್ತಿದೆ. ಗೃಹಲಕ್ಷ್ಮಿಗೂ ಇದೀಗ ಹೊಸ ಕಂಡಿಷನ್ ಹಾಕಿದೆ. ಇದರಿಂದಾಗಿ ಯಾರಿಗೂ ಯೋಜನೆ ಸಿಗದಂತೆ ಮಾಡುವ ಹುನ್ನಾರ ನಡೆಯುತ್ತಿದೆ. ಎಲ್ಲವೂ ಗೊಂದಲಮಯವಾಗಿ ಹೋಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ದೂರಿದರು.
ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರಿಗೆ ನಾನು ಸ್ಪಷ್ಟವಾಗಿ ಹೇಳುತ್ತೇನೆ. 10 ಕೆಜಿ ಅಕ್ಕಿಯಲ್ಲಿ 5 ಕೆಜಿ ಕೇಂದ್ರ ಸರ್ಕಾರದ್ದು. ಆಹಾರ ಭದ್ರತಾ ಕಾಯ್ದೆಯಡಿ 5 ಕೆಜಿ ಅಕ್ಕಿಯನ್ನು ರಾಜ್ಯದ ಜನರಿಗೆ ನೀಡಲಾಗುತ್ತಿದೆ. ಅದನ್ನು ನೀವು ಸ್ಪಷ್ಟವಾಗಿ ಜನರಿಗೆ ಹೇಳಿ. ಇಲ್ಲವಾದರೆ ಕೇಂದ್ರ ಸರ್ಕಾರದ ಅಕ್ಕಿ ಬೇಡ ಎಂದು ಹೇಳಿಬಿಡಿ ಎಂದರು.
ಕಳೆದ ಮೂರು ವರ್ಷದಿಂದ ಕೇಂದ್ರ ಸರ್ಕಾರ ಉಚಿತವಾಗಿ ಎಲ್ಲರಿಗೂ 5 ಕೆಜಿ ಅಕ್ಕಿ ನೀಡುತ್ತಿದೆ. ಇದನ್ನು ಮರೆಮಾಚಿ ಕಾಂಗ್ರೆಸ್ ಐದು ಗ್ಯಾರಂಟಿಗಳಲ್ಲಿಯೂ ಪ್ರಮುಖ ನೆಪ ಹೇಳುತ್ತಿದೆ. ಹೀಗಾಗಿ ಪ್ರತಿಯೊಂದರಲ್ಲೂ ಸುಳ್ಳು ಹೇಳಿ ಜನರ ದಾರಿ ತಪ್ಪಿಸಿದ್ದಾರೆ. ರಾಜ್ಯದಲ್ಲಿ ಸುಳ್ಳು ಹೇಳಿಕೊಂಡು ವಿಧಾನಸಭಾ ಚುನಾವಣೆಯಲ್ಲಿ ಮತ ಪಡೆದು ಅಧಿಕಾರಕ್ಕೆ ಬಂದಿದ್ದಾರೆ ಎಂದು ಕಿಡಿಕಾಡಿದರು.
ಚಕ್ರವರ್ತಿ ಸೂಲಿಬೆಲೆಗೆ ಎಚ್ಚರಿಕೆ ವಿಚಾರ : ಇದೇ ರೀತಿ ವರ್ತನೆ ತೋರಿದರೆ ಜೈಲಿಗೆ ಹಾಕಬೇಕಾಗುತ್ತದೆ ಎಂದು ಚಿಂತಕ, ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಅವರಿಗೆ ಸಚಿವ ಎಂ.ಬಿ. ಪಾಟೀಲ್ ಇತ್ತೀಚೆಗೆ ಎಚ್ಚರಿಕೆ ನೀಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಪ್ರಲ್ಹಾದ ಜೋಶಿ ಪ್ರತಿಕ್ರಿಯಿಸಿದ್ದು, ಅವರು ಮಾತಾಡಿದ ಭಾಷೆ ಬಗ್ಗೆ ಕೂಡಲೇ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಅಯೋಗ್ಯವಾದ ಭಾಷೆ ಬಳಸಿದ್ದರು. ಆಗಲೂ ಕೇಂದ್ರದಲ್ಲಿ ನಮ್ಮ ಸರಕಾರವಿತ್ತು. ನಾವು ಸಂಯಮದಿಂದ ವರ್ತಿಸಿದ್ದೇವೆ. ಪ್ರಜಾಪ್ರಭುತ್ವದಲ್ಲಿ ಟೀಕೆ ಟಿಪ್ಪಣೆಗಳು ಸಹಜ. ಆದರೆ ಇವರು ಮಾಡುತ್ತಿರೋದನ್ನು ನೋಡಿ ಹಿಟ್ಲರ್ ಸರಕಾರ ಅಂತಾ ಚಕ್ರವರ್ತಿ ಹೇಳಿದ್ದಾರೆ. ಅಷ್ಟಕ್ಕೇ ಜೈಲಿಗೆ ಹಾಕುತ್ತೇವೆ ಅಂದರೆ ಹೇಗೆ? ಇದು ದಾರ್ಷ್ಟ್ಯ, ದುರಹಂಕಾರದ ಮಾತು. ಇವರಿಗೆ ಅಧಿಕಾರದ ಪಿತ್ತ ನೆತ್ತಿಗೇರಿದೆ. ಅದಕ್ಕಾಗಿ ಹೀಗೆ ಮಾತನಾಡುತ್ತಿದ್ದಾರೆ. ಜನರು ಇದಕ್ಕೆ ಉತ್ತರ ಕೊಡುತ್ತಾರೆ. ಅಧಿಕಾರದ ದುರಹಂಕಾರ ಬಂದಾಗ ಹೀಗಾಗುತ್ತೆ ಎಂದು ಜೋಶಿ ಆಕ್ರೋಶ ವ್ಯಕ್ತಪಡಿಸಿದರು.
ಧಾರವಾಡ ಗ್ರಾಮೀಣ ಕ್ಷೇತ್ರದ ಸೋಲಿನ ಆತ್ಮಾವಲೋಕನಾ ಸಭೆ : ಸೋಲಿಗೆ ಎದೆಗುಂದುವ ಪಾರ್ಟಿ ನಮ್ಮದಲ್ಲ. ಎರಡೇ ಸೀಟು ಇರುವ ಕಾಲದಲ್ಲಿ ನಾವು ಇದ್ದಾಗ ಧೋ ನಂಬರ್ ಪಾರ್ಟಿ ಅಂತ ನಮಗೆ ಕರೆಯುತ್ತಿದ್ದರು. ಕ್ರಮೇಣ ಬರುಬರುತ್ತಾ ದೇಶದಲ್ಲಿ ನಂಬರ್ ಒನ್ ಪಾರ್ಟಿಯಾಗಿದ್ದೇವೆ ಎಂದು ಪ್ರಲ್ಹಾದ್ ಜೋಶಿ ಹೇಳಿದರು.
ಇಂದು (ಶುಕ್ರವಾರ) ರಪಾಟಿ ಕಲ್ಯಾಣಮಂಟಪದಲ್ಲಿ ಆತ್ಮಾವಲೋಕನಾ ಸಭೆಯಲ್ಲಿ ಮಾತನಾಡಿದ ಅವರು, ನಿಮಗೆಲ್ಲ ಹೃದಯಪೂರ್ವಕ ಕೋಟಿ ನಮನ. ಈ ಕಾರ್ಯಕ್ರಮಕ್ಕೆಂತಲೇ ನಾನು ದೆಹಲಿಯಿಂದ ಬಂದಿದ್ದೇನೆ. ನಿನ್ನೆ ಸಂಜೆ 7 ರಿಂದ 9ರವರೆಗೆ ಪ್ರಧಾನಿ ಜೊತೆ ಮೀಟಿಂಗ್ ಮುಗಿಸಿಕೊಂಡು ಬಂದಿದ್ದೇನೆ. ಕೇವಲ ದೇಶ ಅಲ್ಲ, ಪ್ರಪಂಚದ ದೊಡ್ಡ ಪಾರ್ಟಿ ಬಿಜೆಪಿ. ಲೋಕಸಭೆ ಚುನಾವಣೆಯಲ್ಲಿ 60 ಸಾವಿರ ಲೀಡ್ ನಲ್ಲಿದ್ದೇವೆ. ಯಾರದೋ ಮನೆಯಲ್ಲಿ ಮಕ್ಕಳಾದರು ಅಂತ ಈ ಪಾರ್ಟಿ ಹುಟ್ಟಿಲ್ಲ. ಬಿಜೆಪಿ ಪಕ್ಷದಲ್ಲಿ ಜೈಲಿಗೆ ಹೋಗಿದ್ದಾರೆ. ಸ್ವಾತಂತ್ರ್ಯದಲ್ಲಿ ಲಾಠಿ ಏಟು ತಿಂದಿದ್ದಾರೆ ಎಂದರು.
ನಮ್ಮ ಪಾರ್ಟಿಯಲ್ಲಿ ಭಾರತಮಾತೆಯ ಫೋಟೋ ಇರುತ್ತೆ. ಬೇರೆ ಕಡೆ ಯಾರದೋ ಮಾತೆಯ ಫೋಟೋ ಇರುತ್ತೆ. ಬೇರೆ ದೇಶದಲ್ಲಿ ನಮ್ಮ ದೇಶದ ಪ್ರಧಾನಿ ಮೋದಿ ಅವರ ಪಾದ ಮುಟ್ಟಿ ಆಶೀರ್ವಾದ ಪಡೆಯುತ್ತಾರೆ. ಯುಎಸ್ ಪ್ರಧಾನಿ ಮೋದಿ ಆಟೋಗ್ರಾಫ್ ಕೇಳುತ್ತಾರೆ. ಭಾರತವನ್ನು ಬಲಾಢ್ಯ ದೇಶಗಳು ಸ್ವೀಕಾರ ಮಾಡುತ್ತಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ : ಗೃಹ ಲಕ್ಷ್ಮಿ ಯೋಜನೆಗೆ ಮನೆಯೊಡತಿಯ ಮಗನ ತೆರಿಗೆ ಪಾವತಿ ಪರಿಗಣಿಸುವುದಿಲ್ಲ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್