ಹುಬ್ಬಳ್ಳಿ : ಸಿದ್ದರಾಮಯ್ಯ ಯಾವ ಆಧಾರದ ಮೇಲೆ ಮತ್ತೆ ಮುಖ್ಯಮಂತ್ರಿ ಆಗುತ್ತಾರೆ ಎಂದು ಹೇಳುತ್ತಿದ್ದಾರೋ ನನಗಂತೂ ಗೊತ್ತಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ನೇರವಾಗಿ ಟಾಂಗ್ ಕೊಟ್ಟಿದ್ದಾರೆ.
ನಗರದಲ್ಲಿಂದು ಜೆಡಿಎಸ್-ಕಾಂಗ್ರೆಸ್ ಮತ್ತೆ ಸಮ್ಮಿಶ್ರ ಸರ್ಕಾರ ರಚನೆ ಮಾಡುವ ವಿಚಾರವಾಗಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸಂಖ್ಯಾಬಲವನ್ನು 128 ರಿಂದ 78ಕ್ಕೆ ಇಳಿಸಿದ ಕೀರ್ತಿ ಸಿದ್ದರಾಮಯ್ಯ ಅವರದ್ದಾಗಿದೆ. ಅಷ್ಟೇ ಅಲ್ಲ, ಮೂಲ ಕಾಂಗ್ರೆಸ್ಸಿಗರನ್ನು ಮೂಲೆಗುಂಪು ಮಾಡಿದ ಅವರಿಗೆ ಯಾರು ಬೆಂಬಲ ಕೊಡುತ್ತಾರೆ? ಅದು ಅವರ ಭ್ರಮೆ. ಅವರು ಹಗಲುಗನಸು ಕಾಣುತ್ತಿರಲಿ, ಬಿ.ಎಸ್.ವೈ ಸರ್ಕಾರ ಮುಂದಿನ 42 ತಿಂಗಳು ಸುಭದ್ರ ಅಧಿಕಾರ ನಡೆಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ರು.
ಮಹಾರಾಷ್ಟ್ರದಲ್ಲಿ ಜನಾದೇಶಕ್ಕೆ ದ್ರೋಹ:
ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವಿಸ್ ನೇತೃತ್ವದ ಸರ್ಕಾರ ರಚನೆಗೆ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಅಲ್ಲದೇ ಅವರ ತೀರ್ಮಾನ ಸರಿಯಾಗಿಯೇ ಇತ್ತು. ಆದರೆ ಶಿವಸೇನಾ ಮತ್ತು ಕಾಂಗ್ರೆಸ್, ಎನ್‌ಸಿಪಿ ಸೇರಿಕೊಂಡು ಕುತಂತ್ರದಿಂದ ಅಧಿಕಾರದ ಚುಕ್ಕಾಣಿ ಹಿಡಿಯಿತು. ಚುನಾವಣಾಪೂರ್ವದಲ್ಲಿ ಶಿವಸೇನಾ, ಬಿಜೆಪಿ ಜೊತೆಗೆ ಮೈತ್ರಿ ಹೊಂದಿರುವ ಕಾರಣದಿಂದ್ಲೇ ಶಿವಸೇನಾ ಮಹಾರಾಷ್ಟ್ರದಲ್ಲಿ ಅಷ್ಟು ಸೀಟು ಜಯಗಳಿಸಿದ್ದು. ಇದನ್ನು ಗಮನಕ್ಕೆ ತೆಗೆದುಕೊಳ್ಳದೆ ಕಾಂಗ್ರೆಸ್, ಎನ್‌ಸಿಪಿ ಜೊತೆ ಸೇರಿ ಮತದಾರರ ತೀರ್ಪಿಗೆ ದ್ರೋಹ ಬಗೆದಿದ್ದಾರೆ ಎಂದು ಕಿಡಿಕಾರಿದರು.
ಎನ್‌ಸಿಪಿಯ ಶರದ್ ಪವಾರ್ ಅವರಿಗೆ ಮೋಸ ಮಾಡುವುದು ಹೊಸದಲ್ಲ. ಹಿಂದಿ ಭಾಷೆಯಲ್ಲಿ ಹೇಳುವಂತೆ 'ವೈಸಾ ಮಾಮಾ, ವೈಸಾ ಬತೀಜಾ..' ಎಂಬಂತೆ ಮಹಾರಾಷ್ಟ್ರದ ಪರಿಸ್ಥಿತಿ ಇದೆ ಎಂದು ಲೇವಡಿ ಮಾಡಿದರು.