ಹುಬ್ಬಳ್ಳಿ: ಒಡಿಶಾದ ರೈಲು ದುರಂತ ಎಲ್ಲರಿಗೂ ನೋವು, ದುಃಖವನ್ನು ತಂದಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ಹುಬ್ಬಳ್ಳಿಯಲ್ಲಿಂದು ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ರೈಲು ಅಪಘಾತ ನಡೆಯದಂತೆ ನೋಡಿಕೊಳ್ಳಲಾಗಿತ್ತು. ಆದರೆ ಈಗ ಬಹುದೊಡ್ಡ ದುರಂತ ಸಂಭವಿಸಿ, 200ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ರೈಲ್ವೆ ಮಂತ್ರಿ ಅಶ್ವಿನಿ ವೈಷ್ಣವ್ ಮತ್ತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಪರಿಹಾರ ಕಾರ್ಯಗಳು ಭರದಿಂದ ನಡೆಯುತ್ತಿವೆ ಎಂದು ತಿಳಿಸಿದರು.
ಘಟನೆಯ ಬಗ್ಗೆ ಸಂಪೂರ್ಣ ತನಿಖೆಯನ್ನು ನಡೆಸಿ ಮತ್ತೆ ಈ ರೀತಿಯ ದುರಂತಗಳು ಸಂಭವಿಸದಂತೆ ಎಚ್ಚರಿಕೆ ವಹಿಸಲಾಗುತ್ತದೆ.
ಝೀರೋ ಅಪಘಾತ ವ್ಯವಸ್ಥೆಯನ್ನು ನಮ್ಮ ಸರ್ಕಾರ, ರೈಲ್ವೆ ಮಂತ್ರಿಗಳು ಮಾಡುತ್ತಾರೆ. ಈಗಾಗಲೇ ಮೃತ ಕುಟುಂಬಕ್ಕೆ ಪರಿಹಾರವನ್ನು ಘೋಷಿಸಲಾಗಿದೆ. ಗಾಯಾಳುಗಳಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಮೃತರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿಯನ್ನು ಕೊಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದರು.
ಕಾಂಗ್ರೆಸ್ನ ಗ್ಯಾರಂಟಿ ಜಾರಿ ಬಗ್ಗೆ ಪ್ರತಿಕ್ರಿಯಿಸಿದ ಅವರು, 200 ಯೂನಿಟ್ ವಿದ್ಯುತ್ ಯಾಕೆ ಕೊಡಲಿಲ್ಲ ಹೇಳಲಿ?. ಭಾಷಣದಲ್ಲಿ ಏನು ಹೇಳಿದ್ದರು. ನನಗೂ 200 ಯೂನಿಟ್, ನಿನಗೂ 200 ಯೂನಿಟ್, ಭದ್ರ ನಿನಗೂ 200 ಯೂನಿಟ್, ಶಿವ ನಿನಗೂ 200 ಯೂನಿಟ್ ಎಂದು ಹೇಳಿದ್ದರಲ್ಲ. ಈಗ ನೀವು 200 ಯೂನಿಟ್ ಕೊಡ್ತಿಲ್ಲ, ಅದಕ್ಕೆ ನೀವು ಕಂಡೀಷನ್ ಹಾಕಿದ್ದೀರಿ. ಯಾರು ಕಡಿಮೆ ವಿದ್ಯುತ್ ಬಳಕೆ ಮಾಡುತ್ತಿದ್ದರು ಅಂತವರಿಗೆ ಉಪಯೋಗವಾಗದ ಸ್ಥಿತಿಯನ್ನು ಮಾಡಿಟ್ಟಿದ್ದೀರಿ. ಅದ್ದರಿಂದ ಇದಕ್ಕೆ ಸ್ಪಷ್ಟ ಉತ್ತರವನ್ನು ಕೊಡಬೇಕು. ಇದರಲ್ಲಿಯೂ ಅನೇಕ ಗೊಂದಲಗಳು ಇದ್ದಾವೆ. ಕಾಂಗ್ರೆಸ್ನವರು ಜನರಿಗೆ ಮೋಸ ಮಾಡಿದ್ದಾರೆ ಎಂಬುದು ಸ್ಪಷ್ಟವಾಗಿದೆ ಎಂದು ಪ್ರಹ್ಲಾದ್ ಜೋಶಿ ಕಿಡಿಕಾರಿದರು.
10 ಕೆ.ಜಿ. ಅಕ್ಕಿ ವಿತರಣೆ ಬಗ್ಗೆ ಸ್ಪಷ್ಟತೆಯಿಲ್ಲ. ಈಗಾಗಲೇ ಐದು ಕೆ.ಜಿ. ಅಕ್ಕಿಯನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ಇದಕ್ಕೆ ಮುಖ್ಯಮಂತ್ರಿಗಳು ಉತ್ತರ ಕೊಡಬೇಕು. ಉಡಾಫೆ ಉತ್ತರಗಳು ನಡೆಯೋದಿಲ್ಲ. ರಾಜ್ಯ ಸರ್ಕಾರ ಐದು ಕೆ.ಜಿ. ಅಕ್ಕಿ ಮತ್ತು ಕೇಂದ್ರ ಸರ್ಕಾರ ಐದು ಕೆ.ಜಿ. ಅಕ್ಕಿ ಸೇರಿ ಕೊಡುತ್ತಾರೆ. ಅಥವಾ ನೀವೆ 10 ಕೆ.ಜಿ ಅಕ್ಕಿ ಕೊಡುತ್ತೀರಾ ಎಂಬುದರ ಬಗ್ಗೆ ಸ್ಪಷ್ಟಪಡಿಸಬೇಕು. ಅದನ್ನು ಬಿಟ್ಟು, ಎಲ್ಲವೂ ತಾವೇ ನೀಡುತ್ತಿದ್ದೇವೆ ಎಂದು ಹೇಳುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಷ್ಟು ದಿನ ಕಾಂಗ್ರೆಸ್ ನಾಯಕರು ದೇಶದಲ್ಲಿ ನಿರುದ್ಯೋಗಗಳಾಗಿದ್ದರು. ಕರ್ನಾಟಕದಲ್ಲಿ ಸರ್ಕಾರ ರಚನೆಯಾಗುತ್ತಿದ್ದಂತೆ ಉದ್ಯೋಗ ಸಿಕ್ಕಿದೆ. ಹೀಗಾಗಿ ದೊಡ್ಡದಾಗಿ ಹಾರಾಡುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಜನ ಪಾಠ ಕಲಿಸಲಿದ್ದಾರೆ. ಸಂಸತ್ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಅವರಿಗೆ ವಿರೋಧ ಪಕ್ಷದ ನಾಯಕರಾಗಲು ಸಹ ಅರ್ಹತೆಯಿಲ್ಲ. ಇದನ್ನು ಮರೆಯಬಾರದು. ಅಹಂಕಾರದಿಂದ ಮೆರೆದಾಡುವುದು ಸರಿಯಲ್ಲ ಎಂದು ಪ್ರಹ್ಲಾದ್ ಜೋಶಿ ಹೇಳಿದರು.