ಹುಬ್ಬಳ್ಳಿ: ಕಳೆದ ಮೂರು ತಿಂಗಳಿನಿಂದ ನಗರದ ಗಣೇಶ ಪೇಟ ಪೊಲೀಸ್ ಹೊರಠಾಣೆ ಎದುರು ಕೇಬಲ್ ದುರಸ್ತಿಗೆಂದು ತೆಗೆದ ಗುಂಡಿ ಹಾಗೆಯೇ ಬಿಟ್ಟಿದ್ದು, ಇದುವರೆಗೂ ಗುಂಡಿ ಮುಚ್ಚುವ ಕೆಲಸ ನಡೆದಿಲ್ಲ. ಇದರಿಂದ ಪೊಲೀಸ್ ಸಿಬ್ಬಂದಿ, ಸಾರ್ವಜನಿಕರು ಠಾಣೆಗೆ ಗುಂಡಿ ದಾಟಿಕೊಂಡು ಹೋಗಬೇಕಿದೆ.
ಗಣೇಶ ಪೇಟ ಸರ್ಕಲ್‌ನಲ್ಲಿರುವ ಶಹರ ಪೊಲೀಸ್ ಠಾಣೆ ಎದುರಿಗೆ ಪಾಲಿಕೆ ಸಿಬ್ಬಂದಿ ಕೇಬಲ್ ದುರಸ್ತಿ ಕಾಮಗಾರಿ ಸಲುವಾಗಿ ಗುಂಡಿ ತೆಗೆದಿದ್ದಾರೆ. ಈ ಗಂಡಿಯನ್ನು ಮುಚ್ಚದೆ ಹಾಗೆಯೇ ಬಿಟ್ಟಿರಿವುದರಿಂದ ಪೊಲೀಸ್ ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಪಾಲಿಕೆ ಸಿಬ್ಬಂದಿ ಗುಂಡಿ ಮುಚ್ಚುವ ಕೆಲಸ ಮಾಡದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೂಡಲೇ ಗುಂಡಿ ಮುಚ್ಚಿ ಸಮಸ್ಯೆ ನಿವಾರಣೆ ಮಾಡುವಂತೆ ಪಾಲಿಕೆಗೆ ಮನವಿ ಮಾಡಿದ್ದಾರೆ.