ಹುಬ್ಬಳ್ಳಿ/ಮಂಗಳೂರು: ಕ್ರಿಕೆಟ್ ಪಂದ್ಯಾವಳಿ ಶುರುವಾಗ್ತಿದ್ದಂತೆ ಕ್ರಿಕೆಟ್ ಬೆಟ್ಟಿಂಗ್ ಜಾಲ ಸಕ್ರಿಯಗೊಳ್ತಿದೆ. ಇದಕ್ಕೆ ಯುವ ಸಮುದಾಯದವರೇ ಟಾರ್ಗೆಟ್. ಹಣ ಕಳೆದುಕೊಳ್ತೇವೆ ಎನ್ನುವ ಅರಿವಿದ್ದರೂ ಬೆಟ್ಟಿಂಗ್ ಕಟ್ಟೋದನ್ನ ಮಾತ್ರ ನಿಲ್ಲಿಸಿಲ್ಲ.
ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗುವುದು ಕಾನೂನು ಬಾಹಿರ ಎಂದು ತಿಳಿದಿದ್ದರೂ ಕೂಡ ಹುಬ್ಬಳ್ಳಿ ಧಾರವಾಡದಲ್ಲಿ ಈ ಅಕ್ರಮ ಎಗ್ಗಿಲ್ಲದೇ ಸಾಗುತ್ತಿರುವುದು ವಿಪರ್ಯಾಸ. ಈ ಹಿನ್ನೆಲೆ, ದಾಳಿ ನಡೆಸಿರುವ ಹು-ಧಾ ಪೊಲೀಸರು ಬೆಟ್ಟಿಂಗ್ ಕುಳಗಳನ್ನು ಹೆಡೆಮುರಿ ಕಟ್ಟಿದ್ದಾರೆ.
ಇದೀಗ ಕ್ರಿಕೆಟ್ ಬೆಟ್ಟಿಂಗ್ ದಂಧೆಯು ಆ್ಯಪ್ ಮೂಲಕ ಕಾರ್ಯಾಚರಿಸುತ್ತಿದೆ. ಇದ್ರ ಸೂತ್ರಧಾರರು ವಿದೇಶದಲ್ಲಿರುವುದರಿಂದಲೇ ಪೊಲೀಸ್ ಕಾರ್ಯಾಚರಣೆಗೆ ದೊಡ್ಡ ಸವಾಲಾಗಿದೆ. ಮಂಗಳೂರಲ್ಲಿಯೂ ಈ ಪ್ರಕರಣಗಳಲ್ಲಿ ತೊಡಗಿಕೊಳ್ಳುವವರ ಸಂಖ್ಯೆಯೇನೂ ಕಡಿಮೆಯಿಲ್ಲ. ಪೊಲೀಸರು ಇದಕ್ಕೆ ಕಡಿವಾಣ ಹೇರಲು ಶತಪ್ರಯತ್ನ ಮಾಡುತ್ತಿದ್ದರೂ ದಂಧೆ ನಡೆಯುತ್ತಿದೆ.
ಕೋವಿಡ್ ಒತ್ತಡದ ನಡುವೆಯೂ ಪೊಲೀಸರು ಬೆಟ್ಟಿಂಗ್ ಪ್ರಕರಣಗಳನ್ನು ನಿಯಂತ್ರಿಸಲು ಶ್ರಮ ವಹಿಸುತ್ತಿದ್ದಾರೆ. ಸರ್ಕಾರಗಳು ಮತ್ತಷ್ಟು ಕಠಿಣ ನಿಯಮ ರೂಪಿಸಿ ಪೊಲೀಸ್ ಇಲಾಖೆಗೆ ಸಹಕರಿಸಬೇಕಿದೆ. ಈ ಮೂಲಕ ಕ್ರಿಕೆಟ್ ಬೆಟ್ಟಿಂಗ್ ಅನ್ನು ಸಂಪೂರ್ಣವಾಗಿ ಕಿತ್ತೊಗೆಯಬೇಕಿದೆ.