ಹುಬ್ಬಳ್ಳಿ: ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಜನರು ವಿಫಲವಾದ ಹಿನ್ನೆಲೆಯಲ್ಲಿ ನಿನ್ನೆಯಷ್ಟೇ ಪಾಲಿಕೆಯೇ ಅವಕಾಶ ನೀಡಿದ್ದ ತರಕಾರಿ ಮಾರುಕಟ್ಟೆಯನ್ನ ಬಂದ್ ಮಾಡಲಾಗಿದೆ.
ಜನ ಕ್ಯೂನಲ್ಲಿ ನಿಂತು ತರಕಾರಿ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ನೆಹರೂ ಮೈದಾನ, ಹಳೇ ಬಸ್ ನಿಲ್ದಾಣದಲ್ಲಿ ತಾತ್ಕಾಲಿಕವಾಗಿ ಮಾರ್ಕೆಟ್ ಬಂದ್ ಮಾಡಲಾಗಿದೆ. ಅಲ್ಲದೇ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಬಾಕ್ಸ್ ಹಾಕಿ ಮಾರ್ಕ್ ಮಾಡಿದ್ದರೂ ಅದನ್ನು ಪಾಲಿಸದೇ ಜನ ಡೋಂಟ್ ಕೇರ್ ಅಂದಿದ್ದರು. ಹೀಗಾಗಿ ಜಿಲ್ಲಾಡಳಿತ ಸದ್ಯ ತರಕಾರಿ ಹಾಗೂ ದಿನಸಿ ಮಾರುಕಟ್ಟೆ ಬಂದ್ ಮಾಡಿ, ತರಕಾರಿ ವ್ಯಾಪಾರಿಗಳಿಗೆ ಮನೆ ಮನೆಗೆ ತೆರಳಿ ಮಾರುವಂತೆ ಸೂಚನೆ ನೀಡಿದೆ.
ಪಾಲಿಕೆ ಎಷ್ಟೆ ಪ್ರಯತ್ನಿಸಿದರೂ ಜನ ಮಾತ್ರ ಮುಗಿಬಿದ್ದು ತರಕಾರಿ ಕೊಂಡುಕೊಳ್ಳುತ್ತಿದ್ದರು. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಮಾರ್ಕೆಟ್ ಶಿಫ್ಟ್ ಮಾಡಲಾಗಿದ್ದು, ಸಾರ್ವಜನಿಕರು ಮನೆಯಿಂದ ಹೊರಬರದಂತೆ ಹೊಸ ಪ್ಲಾನ್ ಮಾಡಿದ್ದಾರೆ.