ಹುಬ್ಬಳ್ಳಿ: ಹುಬ್ಬಳ್ಳಿ ವಿಮಾನ ನಿಲ್ದಾಣ ನಿರ್ಮಿಸುವ ಸಲುವಾಗಿ ಜಾಗ ನೀಡಿ ಮನೆ ಕಳೆದುಕೊಂಡವರ ಬದುಕು ಇಂದು ಬೀದಿ ಪಾಲಾಗಿದೆ.
2014 ರಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಜಗದೀಶ್ ನಗರದ ನಿವಾಸಿಗಳು ಜಾಗ ನೀಡಿ ಮನೆ ಕಳೆದುಕೊಂಡಿದ್ದರು. ಇಲ್ಲಿದ್ದ 188 ಕುಟುಂಬಗಳಿಗೆ ಬೇರೆ ಕಡೆಗೆ ಆಶ್ರಯ ಮನೆಗಳನ್ನ ಕಟ್ಟಿಕೊಡುವುದಾಗಿ ಅಂದಿನ ಜಿಲ್ಲಾಧಿಕಾರಿ ರಾಜೇಂದ್ರ ಚೋಳನ್ ಭರವಸೆ ಕೊಟ್ಟಿದ್ದರು. ಕೊಟ್ಟ ಮಾತಿನಂತೆ 8.9 ಕೋಟಿ ವೆಚ್ಚದಲ್ಲಿ 188 ಆಶ್ರಯ ಮನೆಗಳನ್ನು ಸಹ ನಿರ್ಮಾಣ ಮಾಡಲಾಗಿತ್ತು. ಆದ್ರೆ, ಇನ್ನೂ ಆ ಮನೆಗಳ ಹಕ್ಕು ಪತ್ರಗಳು ಫಲಾನುಭವಿಗಳಿಗೆ ಹಸ್ತಾಂತರವಾಗದೇ ಅವರ ಬದುಕು ಸಂಕಷ್ಟಕ್ಕೀಡಾಗಿದೆ.
188 ಆಶ್ರಯ ಮನೆಗಳು ನಿರ್ಮಾಣವಾಗಿ 4 ವರ್ಷವೇ ಕಳೆದಿದೆ, ಇನ್ನೊಂದಿಷ್ಟು ಮನೆಗಳ ಕಾಮಗಾರಿ ಇನ್ನೂ ಬಾಕಿಯಿದೆ. ಆದರೆ, ನಿರ್ಮಾಣ ಮುಗಿದಿರುವ ಮನೆಗಳ ಪರಿಸ್ಥಿತಿಯಂತೂ ಇನ್ನೂ ಹೀನಾಯವಾಗಿದೆ. ಮನೆ ಸುತ್ತ ಬೇಡದ ಗಿಡಗಂಟಿಗಳು ಬೆಳೆದಿದ್ದು, ಇನ್ನೊಂದಿಷ್ಟು ಸಮಯ ಕಳೆದರೆ ವಾಸಿಸಲು ಯೋಗ್ಯವಿಲ್ಲದಂತಾಗುತ್ತದೆ. ಇನ್ನು ಆಶ್ರಯ ಕಳೆದುಕೊಂಡವರು ಬಾಡಿಗೆ ಮನೆಗಳಲ್ಲಿದ್ದು, ಖರ್ಚುವೆಚ್ಚಕ್ಕಾಗಿ ಪರದಾಡುತ್ತಿದ್ದಾರೆ. ಮನೆಗಳನ್ನ ಹಸ್ತಾಂತರ ಮಾಡು ಸಂಬಂಧ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.
ಆರು ತಿಂಗಳಲ್ಲಿ ಮನೆ ವಿತರಿಸುವುದಾಗಿ ಆಶ್ವಾಸನೆ ನೀಡಿದ್ದ ಕಾರಣಕ್ಕೆ ಈ ನಿವಾಸಿಗಳು ವಿಮಾನ ನಿಲ್ದಾಣಕ್ಕೆ ಜಾಗ ಬಿಟ್ಟುಕೊಟ್ಟಿದ್ದರು. ಆದರೆ, ಈಗ 5 ವರ್ಷವೇ ಕಳೆದರು ಮನೆಯಿಲ್ಲದೆ ಪರದಾಡುತ್ತಿದ್ದಾರೆ. ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಮನೆಗಳು ನಿರ್ಮಾಣವಾಗಿದ್ರು, ಫಲಾನುಭವಿಗಳಿಗೆ ಮಾತ್ರ ಮನೆಗಳನ್ನ ಹಸ್ತಾಂತರ ಮಾಡುವುದಕ್ಕೆ ಜಿಲ್ಲಾಡಳಿತ ಮುಂದಾಗದಿರುವುದಕ್ಕೆ ಮನೆ ಕಳೆದುಕೊಂಡವ್ರು ಹಿಡಿ ಶಾಪ ಹಾಕುತ್ತಿದ್ದಾರೆ.