ಧಾರವಾಡ: ಸಾರ್ವಜನಿಕರು ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲು ಹಾಗೂ ಕೋವಿಡ್ ಮುಂಜಾಗ್ರತೆಗಾಗಿ ಧಾರವಾಡ ಜಿಲ್ಲಾಡಳಿತ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ವಾಟ್ಸ್ಆ್ಯಪ್ ಮೂಲಕ ಜನರಿಗೆ ಸರ್ಕಾರಿ ಸೌಲಭ್ಯಗಳನ್ನು ವಿಸ್ತರಿಸುತ್ತಿದೆ.
ಕಚೇರಿಗೆ ಬಾರದೇ ಮನೆಯಲ್ಲಿಯೇ ಕುಳಿತು ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿಗೆ ಅರ್ಹರನ್ನು ಆಯ್ಕೆ ಮಾಡಿರುವ ಕ್ರಮವನ್ನು ಬೃಹತ್ ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಮುಕ್ತ ಕಂಠದಿಂದ ಶ್ಲಾಘನೆ ಮಾಡಿದರು ಹಾಗೂ ಫಲಾನುಭವಿಗಳಿಗೆ ಸ್ವತಃ ಆದೇಶ ಪತ್ರ ವಿತರಿಸಿದರು.
ಸಂಧ್ಯಾ ಸುರಕ್ಷಾ ಪಿಂಚಣಿ ಪಡೆದ ಸಣ್ಣ ಮುಕ್ತುಂಸಾಬ ಗುಮ್ಮಗೋಳ ಮಾತನಾಡಿ, ಕೋವಿಡ್ ವ್ಯಾಪಕವಾಗಿ ಹರಡಿರುವ ಈ ಸಂದರ್ಭದಲ್ಲಿ ಜಿಲ್ಲಾಡಳಿತವು ವಾಟ್ಸ್ಆ್ಯಪ್ ಮೂಲಕವೇ ನನ್ನ ಅರ್ಜಿ ಪಡೆದು ಪಿಂಚಣಿಗೆ ಆಯ್ಕೆ ಮಾಡಿರುವುದು ಸಮಾಧಾನ ತಂದಿದೆ. ಆಡಳಿತ ಯಂತ್ರದ ಬಗೆಗೆ ಹೊಸ ಭರವಸೆ ಮೂಡಿಸಿದೆ ಎಂದರು.
ರಾಜ್ಯ ಸರ್ಕಾರಕ್ಕೆ ಒಂದು ವರ್ಷ ಪೂರ್ಣಗೊಂಡ ಸಂದರ್ಭದಲ್ಲಿ ಇಲ್ಲಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮುಖ್ಯಮಂತ್ರಿಗಳ ನೇರ ಸಂವಾದ ಕಾರ್ಯಕ್ರಮದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವರು ವಿಧವಾ ವೇತನ ಪಿಂಚಣಿ ಪಡೆಯುತ್ತಿರುವ ಧಾರವಾಡದ ಪಾರ್ವತಿ ವಿಠ್ಠಲ ಚೌಡಿ, ವಿಕಲಚೇತನರ ಪಿಂಚಣಿಗೆ ಆಯ್ಕೆಯಾದ ಮಮ್ಮಿಗಟ್ಟಿಯ ಉಮೇಶ ಮಡಿವಾಳಪ್ಪ ಪಟಾತ, ವೃದ್ಧಾಪ್ಯ ಪಿಂಚಣಿಗೆ ಆಯ್ಕೆಯಾಗಿರುವ ಹುಬ್ಬಳ್ಳಿಯ ಮಹಾದೇವಪ್ಪ ಪಂಪನವರ, ಉಪ್ಪಿನಬೆಟಗೇರಿಯ ಅಪ್ಪಾಸಾಬ ಹಿರೆಕುಂಬಿ ಅವರಿಗೆ ಆದೇಶ ಪತ್ರ ಹಸ್ತಾಂತರಿಸಿದರು.