ಧಾರವಾಡ : ಅವಧಿ ಪೂರ್ಣ ಸಾಲ ಮರುಪಾವತಿಗೆ ದಂಡ ಹಾಕಿದ ಇಂಡಿಯಾ ಬುಲ್ಸ್ ಫೈನಾನ್ಸ್ ಕಂಪನಿಗೆ ಪರಿಹಾರ ಮತ್ತು ದಂಡ ಕೊಡಲು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗದ ಆದೇಶಿಸಿದೆ.
ಹುಬ್ಬಳ್ಳಿಯ ಸಂತೋಷ ಜೈನ್ ಎಂಬವರು 2018ರಲ್ಲಿ ಇಂಡಿಯಾ ಬುಲ್ಸ್ ಹೋಮ್ ಲೋನ್ಸ್ ಅವರಿಂದ 1 ಕೋಟಿ ರೂಪಾಯಿ ಸಾಲ ಪಡೆದಿದ್ದರು. ಒಪ್ಪಂದದ ಪ್ರಕಾರ ಸಾಲದ ಮೇಲೆ ಶೇ.9.5ರಂತೆ ಬಡ್ಡಿ ಸಮೇತ ಲೆಕ್ಕ ಹಾಕಿ 1,04,422 ರೂ. ನಂತೆ 180 ಕಂತುಗಳನ್ನು ಸಾಲಗಾರ ಮರುಪಾವತಿ ಮಾಡುತ್ತಿದ್ದರು. 27 ಕಂತುಗಳನ್ನು ಸಾಲಗಾರ ಕಟ್ಟಿದ ನಂತರ ಅವರ ಅನುಮತಿ ಇಲ್ಲದೇ ಉಳಿದ ಕಂತುಗಳ ಮೇಲೆ ಶೇ.12.30 ರಷ್ಟು ಬಡ್ಡಿ ಹೆಚ್ಚಿಸಿದರು.
ಅದಕ್ಕೆ ಒಪ್ಪದ ಸಾಲಗಾರ, ದೂರುದಾರ ಬಾಕಿ ಉಳಿದ ಸಾಲದ ಹಣವನ್ನು ಇಂಡಿಯಾ ಬುಲ್ಸ್ ಹೋಮ್ ಲೋನ್ಸ್ರವರಿಗೆ ಮರುಪಾವತಿ ಮಾಡಿದರು. ಆ ಅವಧಿ ಪೂರ್ವ ಮರುಪಾವತಿಯ ಮೇಲೆ ಇಂಡಿಯಾ ಬುಲ್ಸ್ ಹೋಮ್ ಲೋನ್ಸ್ ರವರು 3,48,815.78 ರೂ. ದಂಡ ಹಾಕಿದ್ದರು. ಆ ರೀತಿ ಮರುಪಾವತಿಯ ಮೇಲೆ ದಂಡ ಹಾಕಿರುವುದು ರಿಸರ್ವ ಬ್ಯಾಂಕ್ ನಿಯಮಕ್ಕೆ ವಿರುದ್ಧವಾಗಿದ್ದು, ಇದರಿಂದಾಗಿ ಇಂಡಿಯಾ ಬುಲ್ಸ್ ಹೋಮ್ ಲೋನ್ಸ್ ಅವರಿಂದ ತನಗೆ ಸೇವಾ ನ್ಯೂನ್ಯತೆ ಆಗಿ ಮೋಸವಾಗಿದೆ ಎಂದು ದೂರುದಾರ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ದೂರಿನ ಬಗ್ಗೆ ಕೂಲಂಕಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ ಭೂತೆ ಹಾಗೂ ವಿಶಾಲಾಕ್ಷಿ ಬೋಳಶೆಟ್ಟಿ, ಪ್ರಭು.ಸಿ. ಹಿರೇಮಠ ಸದಸ್ಯರು ದೂರುದಾರರ ಅನುಮತಿ ಇಲ್ಲದೇ ಬಾಕಿ ಉಳಿದ ಸಾಲದ ಮೇಲೆ ಶೇ.12.30 ರಂತೆ ಬಡ್ಡಿದರ ಹೆಚ್ಚಿಸಿರುವುದು ತಪ್ಪು. ಕಾರಣ ಸಾಲಗಾರ ತನ್ನ ಬಾಕಿ ಉಳಿದ ಸಾಲವನ್ನು ಮರುಪಾವತಿ ಮಾಡಿದ್ದು ಸರಿ ಇರುತ್ತದೆ ಎಂದು ಆಯೋಗ ಅಭಿಪ್ರಾಯಪಟ್ಟಿದೆ.
ಅದರ ಮೇಲೆ 3,48,815.78 ರೂ. ದಂಡ ಹಾಕಿರುವುದು ರಿಸರ್ವ ಬ್ಯಾಂಕಿನ ನಿಯಮಕ್ಕೆ ವಿರುದ್ಧವಾದುದು ಎಂದು ಹೇಳಿದೆ. ಇದರಿಂದ ಗ್ರಾಹಕನಾದ ದೂರುದಾರನಿಗೆ ಇಂಡಿಯಾ ಬುಲ್ಸ್ ಹೋಮ್ ಲೋನ್ಸ್ ರವರು ಸೇವಾ ನ್ಯೂನ್ಯತೆ ಎಸಗಿ ಮೋಸ ಮಾಡಿದ್ದಾರೆ ಎಂದು ಆಯೋಗ ತೀರ್ಪು ನೀಡಿದೆ.
ಇದಕ್ಕಾಗಿ ಇಂಡಿಯಾ ಬುಲ್ಸ್ ಹೋಮ್ ಲೋನ್ಸ್ ರವರು ದೂರುದಾರರಿಗೆ 3,48,815.78 ರೂ. ಮರುಪಾವತಿಸುವಂತೆ ಹಾಗೂ ದೂರುದಾರರಿಗೆ ಆಗಿರುವ ತೊಂದರೆ ಮತ್ತು ಮಾನಸಿಕ ಹಿಂಸೆಗೆ 50 ಸಾವಿರ ರೂ. ಪರಿಹಾರ ಕೊಡುವಂತೆ ಮತ್ತು 10 ಸಾವಿರ ರೂಪಾಯಿ ಈ ಪ್ರಕರಣದ ಖರ್ಚು ವೆಚ್ಚವನ್ನು ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ನೀಡುವಂತೆ ಆಯೋಗ ತೀರ್ಪು ನೀಡಿದೆ.
ಇದನ್ನೂ ಓದಿ :ಮನೆ ಕಟ್ಟಿಕೊಡದ ಬಿಲ್ಡರ್: ಬಡ್ಡಿ ಸಮೇತ ಪರಿಹಾರ, ದಂಡ ಕೊಡಲು ಜಿಲ್ಲಾ ಗ್ರಾಹಕರ ಆಯೋಗ ಆದೇಶ