ಹುಬ್ಬಳ್ಳಿ: ಜಿಲ್ಲೆಯ ಶ್ರೀ ವಿವೇಕಾನಂದ ಇಂಗ್ಲಿಷ್ ಮೀಡಿಯಂ ಸ್ಕೂಲ್ನಲ್ಲಿ ಮೂಲ ಸೌಕರ್ಯಗಳಿಲ್ಲದೆ ಹೋದರು ಪ್ರವೇಶ ಶುಲ್ಕವನ್ನು ಪ್ರತಿ ವರ್ಷ ಹೆಚ್ಚಳ ಮಾಡುತ್ತಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳ ಪಾಲಕರು ಶಾಲೆಯ ಆಡಳಿತ ಮಂಡಳಿ ವಿರುದ್ಧ ಕ್ಷೇತ್ರ ಶಿಕ್ಷಣ ಅಧಿಕಾರಿ ಕಾರ್ಯಾಲಯದ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಈ ವೇಳೆ ಪ್ರತಿಭಟನೆ ನಿರತ ಪಾಲಕರು, ಶ್ರೀ ವಿವೇಕಾನಂದ ಇಂಗ್ಲಿಷ್ ಮೀಡಿಯಂ ಸ್ಕೂಲ್ ನ್ನು ಕಳೆದ ನಾಲ್ಕು ವರ್ಷಗಳ ಹಿಂದೆ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಆದರೆ ಕನಕದಾಸ ಶಿಕ್ಷಣ ಸಂಸ್ಥೆಗೆ ಶಾಲೆಯನ್ನು ಮಾರಾಟ ಮಾಡಿದ ನಂತರ, ಶಾಲೆಯ ಶಿಕ್ಷಣ ವ್ಯವಸ್ಥೆ ಹಾಳಾಗಿದೆ. ಅಲ್ಲದೇ ಶಾಲೆಯಲ್ಲಿ ಮೂಲಭೂತ ಸೌಕರ್ಯಗಳೇ ಇಲ್ಲವಾಗಿದೆ ಎಂದಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಶಾಲೆಯಲ್ಲಿ 1000 ರಿಂದ 1200 ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯುತ್ತಿದ್ದು, ಈ ವಿದ್ಯಾರ್ಥಿಗಳಿಗೆ ಶಾಲೆ ಪ್ರಾರಂಭವಾಗಿ ನಾಲ್ಕು ತಿಂಗಳು ಕಳೆಯುತ್ತಿದ್ದರೂ ಸಮವಸ್ತ್ರ ನೀಡಿಲ್ಲ. ಅಲ್ಲದೇ ಮಕ್ಕಳು ಮಧ್ಯಾಹ್ನ ಊಟ ಮಾಡಲು ಸರಿಯಾದ ಕೊಠಡಿಗಳಿಲ್ಲದೇ ಆಟದ ಮೈದಾನದಲ್ಲಿ ಕುಳಿತು ಊಟ ಮಾಡುತ್ತಿದ್ದಾರೆ. ಶಾಲೆಯಲ್ಲಿ ಕನಿಷ್ಠ ಸ್ವಚ್ಛ ಶೌಚಾಲಯ ಇಲ್ಲ.
ಇದರಿಂದ ವಿದ್ಯಾರ್ಥಿಗಳು ಶಾಲೆ ಮುಗಿದು ಮನೆಗೆ ಹೋಗುವವರೆಗೆ ಶೌಚಾಲಯಕ್ಕೆ ಹೋಗುವಂತಿಲ್ಲ. ಅಲ್ಲದೇ ಶೌಚಾಲಯದ ಅಸಹ್ಯ ವಾಸನೆ ಸಹಿಸಿಕೊಂಡು ಮಕ್ಕಳು ಪಾಠ ಕೇಳುವಂತಾಗಿದೆ. ಇದರಿಂದ ಮಕ್ಕಳು ಮಾನಸಿಕವಾಗಿ ಕುಗ್ಗುತ್ತಿದ್ದಾರೆ. ಅಷ್ಟೇ ಅಲ್ಲದೇ ಶಾಲೆಗೆ ಸರಿಯಾದ ಗೇಟ್, ಸಿಸಿ ಕ್ಯಾಮೆರಾ ಸೇರಿದಂತೆ ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಲೆ ಇಂತಹ ಅವ್ಯವಸ್ಥೆ ಹೊಂದಿದ್ದರೂ ಸಹಿತ ಆಡಳಿತ ಮಂಡಳಿ ಪ್ರತಿ ವರ್ಷ ಪ್ರವೇಶ ಶುಲ್ಕವನ್ನು ಹೆಚ್ಚಿಸುತ್ತಿದೆ. ಅಲ್ಲದೇ ಪಾಲಕರಿಂದ ಆ ಫೀಸು ಈ ಫೀಜು, ಡೊನೇಷನ್ ಅಂತಾ ವರ್ಷಕ್ಕೆ 25 ಸಾವಿರದಿಂದ 30 ಸಾವಿರ ವಸೂಲಿ ಮಾಡುತ್ತದೆ ಎಂದು ಆಡಳಿತ ಮಂಡಳಿ ವಿರುದ್ಧ ಹರಿಹಾಯ್ದರು.
ಈ ಕೂಡಲೇ ಆಡಳಿತ ಮಂಡಳಿಯನ್ನು ಬದಲಾಯಿಸಿ ಹಳೆಯ ಆಡಳಿತ ಮಂಡಳಿಗೆ ಶಾಲೆಯನ್ನು ಕೊಡಬೇಕೆಂದು ಆಗ್ರಹಿಸಿದರು. ಇನ್ನೂ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಅವರಿಗೆ ಶಿಕ್ಷಣಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದರು.