ಧಾರವಾಡ: ಲಾಕ್‍ಡೌನ್ ಅವಧಿಯಲ್ಲಿ ಬೇಕರಿಗಳು ಕೂಡ ಬ್ರೆಡ್, ಬಿಸ್ಕಿಟ್, ರಸ್ಕ್, ಬನ್ ನಂತಹ ಆಯ್ದ ಪದಾರ್ಥಗಳನ್ನು ಪ್ರತಿದಿನ ಬೆಳಿಗ್ಗೆ 6 ರಿಂದ 10ಗಂಟೆಯವರೆಗೆ ಮಾರಾಟ ಮಾಡಲು ಅವಕಾಶ ನೀಡಲಾಗಿದೆ. ಬೇಕರಿ ಪದಾರ್ಥಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ಸ್ವಚ್ಛತೆ ಹಾಗೂ ಸಾಮಾಜಿಕ ಅಂತರ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಬೇಕರಿ ಮಾಲೀಕರ ಸಭೆಯಲ್ಲಿ ಮಾತನಾಡಿದ ಅವರು, ಭಾರತ ಸರ್ಕಾರದ ಗೃಹ ಇಲಾಖೆಯು ಬೇಕರಿ ಪದಾರ್ಥಗಳ ಉತ್ಪಾದನೆ ಮತ್ತು ಪೂರೈಕೆಗೆ ಅವಕಾಶ ಕಲ್ಪಿಸಿದೆ. ಕರ್ನಾಟಕ ಸರ್ಕಾರವೂ ಪೂರಕ ಸುತ್ತೋಲೆ ಹೊರಡಿಸಿ, ಬೇಕರಿ ಕಾರ್ಮಿಕರು ಮತ್ತು ಉತ್ಪಾದನಾ ಘಟಕಗಳಲ್ಲಿ ಉನ್ನತ ಮಟ್ಟದ ಆರೋಗ್ಯ, ಸ್ವಚ್ಛತೆ, ಸಾಮಾಜಿಕ ಅಂತರ ಕಾಯ್ದುಕೊಂಡು ಬ್ರೆಡ್, ಬಿಸ್ಕಿಟ್, ರಸ್ಕ್, ಬನ್ ನಂತಹ ಉತ್ಪನ್ನಗಳನ್ನು ಗ್ರಾಹಕರಿಗೆ ಮಾರಾಟ ಮಾಡಬಹುದು. ಪಾರ್ಸೆಲ್ ನೀಡಲು ಮಾತ್ರ ಅವಕಾಶವಿದೆ. ಯಾವುದೇ ಕಾರಣಕ್ಕೂ ಬೇಕರಿಯಲ್ಲಿಯೇ ಸೇವೆ ನೀಡಬಾರದು. ಕಾರ್ಮಿಕರ ಆರೋಗ್ಯ ತಪಾಸಣೆ, ಪದೆ ಪದೆ ಕೈತೊಳೆಯುವುದು, ಮಾಸ್ಕ್ ಧರಿಸುವುದು, ಬಿಸಿನೀರು ಬಳಸುವುದು, ಕೈಗವಸು ಹಾಕಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ.
ಬೇಕರಿ ಮಾಲೀಕರು ಇವುಗಳನ್ನು ಅನುಸರಿಸಿ ಜನರಿಗೆ ಯಾವುದೇ ರೀತಿ ತೊಂದರೆಯಾಗದಂತೆ, ಜನಸಂದಣಿಗೆ ಅವಕಾಶವಾಗದಂತೆ ಎಚ್ಚರಿಕೆ ಕ್ರಮಗಳನ್ನು ಕೈಗೊಂಡು ಕಾರ್ಯನಿರ್ವಹಿಸಬೇಕು. ಆಯ್ದ ವಸ್ತುಗಳನ್ನು ಹೊರತು ಪಡಿಸಿ ಬೇರೆ ಪದಾರ್ಥಗಳನ್ನು ಮಾರಾಟ ಮಾಡಬಾರದು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.