ಹುಬ್ಬಳ್ಳಿ: ಪೊಲೀಸ್ ಇನ್ಸ್ಪೆಕ್ಟರ್ ಒಬ್ಬರ ಖಾತೆಗೆ ಆನ್ಲೈನ್ ವಂಚಕರು ಕನ್ನ ಹಾಕಿದ ಘಟನೆ ಬೆಳಕಿಗೆ ಬಂದಿದೆ. ಧಾರವಾಡ ಉಪನಗರ ಠಾಣೆ ಇನ್ಸ್ಪೆಕ್ಟರ್ ದಯಾನಂದ ಶೇಗುಣಿಸಿ ಅವರ ಬ್ಯಾಂಕ್ ಖಾತೆಯಲ್ಲಿದ್ದ 8.25 ಲಕ್ಷ ಹಣವನ್ನು ಅಪರಿಚಿತರು ವರ್ಗಾವಣೆ ಮಾಡಿಕೊಂಡಿದ್ದು, ಈ ಕುರಿತಂತೆ ಅವರು ಹುಬ್ಬಳ್ಳಿ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದಯಾನಂದ ಯಾರೊಂದಿಗೂ ಮಾಹಿತಿ ಹಂಚಿಕೊಂಡಿಲ್ಲ. ಆದರೂ ಅವರ ಹಣ ವರ್ಗಾವಣೆಯಾಗಿದೆ. ಬ್ಯಾಂಕಿನವರು ನೆಟ್ ಸೆಕ್ಯೂರಿಟಿ ಬಳಸದೆ ನಿಷ್ಕಾಳಜಿಯಿಂದಲೋ ಅಥವಾ ಯಾವುದೇ ಅಧಿಕಾರಿಯ ಹಸ್ತಕ್ಷೇಪದಿಂದಲೋ ಅಪರಿಚಿತ ವ್ಯಕ್ತಿ ಹಣ ವರ್ಗಾಯಿಸಿಕೊಂಡಿದ್ದಾನೆ. ಬ್ಯಾಂಕ್ ಖಾತೆಗೆ ಲಿಂಕ್ ಇರುವ ಮೊಬೈಲ್ ಸ್ವಿಚ್ಡ್ ಆಫ್ ಆಗಿರುವ ಸಂದರ್ಭದಲ್ಲಿ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ 50 ಸಾವಿರ ಹಣವನ್ನು 12 ಬಾರಿ ಹಾಗೂ 45 ಸಾವಿರ ಮೂರು ಬಾರಿ, 25 ಸಾವಿರ ಎರಡು ಬಾರಿ ವರ್ಗಾಯಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ವೈನ್ಶಾಪ್ ಮ್ಯಾನೇಜರ್ ವಿರುದ್ಧ ₹44 ಲಕ್ಷ ವಂಚನೆ ದೂರು: ಗೋಕುಲ್ ರಸ್ತೆಯ ರವಿನಗರದ ಕರ್ನಾಟಕ ವೈನ್ಸ್ ಅಂಗಡಿಯ ವ್ಯವಸ್ಥಾಪಕ ಮಂಜುನಾಥ ಪೂಜಾರ ಅವರ ಮೇಲೆ ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವೈನ್ ಶಾಪ್ ಮ್ಯಾನೇಜರ್ ಮಂಜುನಾಥ 44.18 ಲಕ್ಷ ಮೌಲ್ಯದ ಮದ್ಯ ಮಾರಾಟದಲ್ಲಿ ಅವ್ಯವಹಾರ ಮಾಡಿದ್ದಾರೆ ಎಂದು ವೈನ್ ಶಾಪ್ ಮಾಲೀಕ ನೀಲಕಂಠ ಆಕಳವಾಡಿ ಪ್ರಕರಣ ದಾಖಲಿಸಿದ್ದಾರೆ.
2017 ರ ಸೆ. 5 ರಿಂದ 2023 ರ ಎ. 25 ರವರಗೆ ಅಂಗಡಿಯ ಲೆಕ್ಕ ಪತ್ರಗಳ ವರದಿ ನೀಡದೆ ಓಡಿ ಹೋಗಿದ್ದರು. ಆ ವೇಳೆ ಲೆಕ್ಕ ಪರಿಶೋಧನೆ ನಡೆಸಿದಾಗ ಅವ್ಯವಹಾರ ನಡೆದಿರುವುದು ತಿಳಿದು ಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಬೆಳ್ತಂಗಡಿ: ಮನೆಗೆ ಬಂದ ಪೊಲೀಸರನ್ನು ನಕ್ಸಲರೆಂದು ಪ್ರಚಾರ ಮಾಡಿದ ವಂಚನೆ ಪ್ರಕರಣದ ಆರೋಪಿ