ಧಾರವಾಡ: ದೇಶಾದ್ಯಂತ ಲಾಕ್ಡೌನ್ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದು ಎಂಬ ನಿಟ್ಟಿನಲ್ಲಿ ಕರ್ನಾಟಕ ವಿಶ್ವ ವಿದ್ಯಾಲಯ ತಂತ್ರಜ್ಞಾನದ ಮೊರೆ ಹೋಗಿದೆ.
ಆನ್ ಲೈನ್ ಬೋಧನೆಗೆ ಕವಿವಿ ಮುಂದಾಗಿದ್ದು, ಉಪನ್ಯಾಸಕರಿಗೆ ಪಠ್ಯವನ್ನು ಮನೆಯಲ್ಲಿ ಕುಳಿತು ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ. ಈಗಾಗಲೇ ಕವಿವಿ ಎಲ್ಲಾ ವಿಭಾಗಗಳು ಆನ್ಲೈನ್ನಲ್ಲಿ ವಿದ್ಯಾರ್ಥಿಗಳಿಗೆ ಉಪನ್ಯಾಸಕರು ಪಾಠ ಮಾಡುತ್ತಿದ್ದಾರೆ.
ಸಾಮಾನ್ಯವಾಗಿ ಶೈಕ್ಷಣಿಕ ದಿನಗಳು ಈ ತಿಂಗಳ ಅಂತ್ಯಕ್ಕೆ ಪೂರ್ಣಗೊಂಡು ಮೇ ತಿಂಗಳಲ್ಲಿ ಪರೀಕ್ಷೆ ಮುಗಿಸಿ ರಜೆ ನೀಡಲಾಗುತ್ತಿತ್ತು. ಆದರೆ ಕೊರೊನಾ ವೈರಸ್ ಭೀತಿಯಿಂದ ಮಾರ್ಚ್ ತಿಂಗಳಲ್ಲಿ ಎಲ್ಲಾ ವಿಭಾಗದ ತರಗತಿಗಳು ಬಂದ್ ಆಗಿವೆ. ಯಾವಾಗ ಪ್ರಾರಂಭವಾಗುತ್ತದೆ ಎಂಬುದನ್ನು ಹೇಳಲಾಗದು ಹೀಗಾಗಿ ವಿದ್ಯಾರ್ಥಿಗಳಿಗೆ ಪಠ್ಯ ಪೂರ್ಣಗೊಳಿಸದೇ ಪರೀಕ್ಷೆ ತಯಾರಿ ಹೇಗೆ ಎಂಬ ಆತಂಕ ಎದುರಾಗಿತ್ತು. ಇದನ್ನರಿತ ಉನ್ನತ ಶಿಕ್ಷಣ ಇಲಾಖೆ ಎಲ್ಲಾ ವಿವಿಗಳಿಗೆ ಆನ್ಲೈನ್ ಪಾಠ ಮಾಡಲು ಸೂಚನೆ ನೀಡಿದೆ.
ಲಾಕ್ಡೌನ್ ಪೂರ್ಣಗೊಳ್ಳುವವರೆಗೂ ಉಪನ್ಯಾಸಕರು ವಾಟ್ಸ್ಆ್ಯಪ್, ಯೂಟ್ಯೂಬ್ ಹಾಗೂ ಜೂಮ್ ಆ್ಯಫ್ ಸೇರಿದಂತೆ ಸಾಮಾಜಿಕ ಜಾಲತಾಣ ಬಳಸಿಕೊಂಡು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಶಾಲಾ ಕಾಲೇಜುಗಳ ಬೀಗ ತೆರೆದು ಬೋಧನೆ ಮಾಡಲು ಅವಕಾಶ ಇಲ್ಲದ ಕಾರಣ ಮನೆಯಲ್ಲಿ ಕುಳಿತು ವಿದ್ಯಾರ್ಥಿಗಳಿಗೆ ಆನ್ ಲೈನ್ ಮೂಲಕ ಪಾಠ ಮಾಡಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ಕೆಲಸಕ್ಕೆ ಕವಿವಿ ಮುಂದಾಗಿದೆ.