ಹುಬ್ಬಳ್ಳಿ : ಹುಬ್ಬಳ್ಳಿಯ ವೃದ್ಧೆಯೊಬ್ಬರು ದೇಹದಾನ ಮಾಡುವ ಮೂಲಕ ಸಾವಿನಲ್ಲಿಯೂ ಸಾರ್ಥಕತೆ ಮೆರೆದಿದ್ದಾರೆ. ಗಿರಿಜಾ ಜಿ ಯಾದವಾಡ್ ಎಂಬುವರು ದೇಹದಾನ ಮಾಡಿ ಇಹಲೋಕ ತ್ಯಜಿಸಿದ್ದಾರೆ.
ಹುಬ್ಬಳ್ಳಿಯ ಶಿರೂರ ಪಾರ್ಕ್ ನಿವಾಸಿಯಾದ ಇವರು ತಮ್ಮ 70ನೇ ವಯಸ್ಸಿನಲ್ಲಿ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಮರಣದ ನಂತರ ತನ್ನ ದೇಹವನ್ನು ವೈದ್ಯಕೀಯ ಕಾಲೇಜಿಗೆ ದಾನ ಮಾಡಲು ಬಯಸಿದ್ದರು.
ದೇಹದಾನ ಮಾಡುವ ವಿಷಯವನ್ನು ಕುಟುಂಬ ವರ್ಗದ ಎಲ್ಲರಿಗೂ ತಿಳಿಸಿ ಗಿರಿಜಾ ಅವರ ಅಂತಿಮ ಆಸೆಗೆ ಒಪ್ಪಿಗೆ ಸೂಚಿಸಿ ದೇಹದಾನಕ್ಕೆ ಒಪ್ಪಿದ್ದರು. ಬೈಲಹೊಂಗಲದ ಡಾ. ರಾಮಣ್ಣನವರ ಚಾರಿಟೇಬಲ್ ಟ್ರಸ್ಟ್ ಮುಖಾಂತರ ಕೆಎಲ್‍ಇ ವಿಶ್ವವಿದ್ಯಾಲಯದ ಬಿಎಂಕೆ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯಕ್ಕೆ ದಾನ ಮಾಡಲು ಒಪ್ಪಿಗೆ ಸೂಚಿಸಿದ್ದರು.
ಇದಲ್ಲದೇ ಹುಬ್ಬಳ್ಳಿಯ ಎಮ್. ಎಮ್. ಜೋಶಿ ನೇತ್ರ ಬಂಡಾರಕ್ಕೆ ನೇತ್ರವನ್ನು, ಬೆಳಗಾವಿಯ ಕೆಎಲ್‍ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆ ರೋಟರಿ ಚರ್ಮ ಬಂಡಾರಕ್ಕೆ ಚರ್ಮವನ್ನು ನೀಡಲಾಯಿತು.
ಮೂಢನಂಬಿಕೆ ತೊರೆದು ದೇಹ ಮತ್ತು ಅಂಗಾಂಗ ದಾನ ಮಾಡಿ : ನಿನ್ನೆ ಸಾಯಂಕಾಲ ವಯೋಸಹಜವಾಗಿ ಇಹಲೋಕ ತ್ಯಜಿಸಿದ್ದಾರೆ. ಅವರ ಅಂತಿಮ ಆಸೆಯಂತೆ ಯಾದವಾಡ್ ಕುಟುಂಬ ದೇಹವನ್ನು ದಾನ ಮಾಡಿದ್ದಾರೆ. ಹುಬ್ಬಳ್ಳಿಗೆ ಬಂದ ಡಾ. ರಾಮಣ್ಣವರ್ ಆಸ್ಪತ್ರೆ ವೈದ್ಯರು ಮೃತದೇಹವನ್ನು ತಮ್ಮ ಸುಪರ್ದಿಗೆ ಪಡೆದಿದ್ದಾರೆ.
ದೇಹದಾನದ ಮಹತ್ವದ ಕುರಿತು ಸಾರ್ವಜನಿಕರಿಗೆ ತಿಳಿಸಿದ್ದಾರೆ. ಮೂಢನಂಬಿಕೆಯ ಕಾರಣ ಬಹುತೇಕರು ದೇಹದಾನ ಮತ್ತು ಅಂಗಾಂಗ ದಾನ ಮಾಡಲು ಮುಂದೆ ಬರಲ್ಲ. ಆದರೆ,ಮನುಷ್ಯರಾದವರು ಸಾವಿನ ನಂತರವೂ ಇನ್ನೊಬ್ಬರ ಜೀವನದಲ್ಲಿ ಬೆಳಕು ತರಬೇಕೆಂದರೆ ದೇಹ ಮತ್ತು ಅಂಗಾಂಗ ದಾನ ಬಹುಮುಖ್ಯ.
ಕಣ್ಣು, ಕಿಡ್ನಿ, ಲಿವರ್, ಹೃದಯ, ಚರ್ಮ ಏನು ಬೇಕಾದರೂ ದಾನ ಮಾಡಬಹುದು. ಜನರು ತಪ್ಪು ತಿಳಿವಳಿಕೆ ಬಿಟ್ಟು ದೇಹ ಮತ್ತು ಅಂಗಾಂಗ ದಾನಕ್ಕೆ ಮುಂದಾಗಬೇಕು ಎಂದು ವೈದ್ಯರು ಜಾಗೃತಿ ಮೂಡಿಸಿದರು. ಮೃತ ಹಿರಿಯ ಜೀವದ ಆತ್ಮಕ್ಕೆ ಶಾಂತಿ ಕೋರಿ ಸ್ಥಳೀಯ ನಾಗರಿಕರು ಪ್ರಾರ್ಥನೆ ಸಲ್ಲಿಸಿದರು. ನಂತರ ವೈದ್ಯರು ಮೃತ ದೇಹವನ್ನು ವೈದ್ಯಕೀಯ ಆಸ್ಪತ್ರೆಗೆ ಕೊಂಡೊಯ್ದರು.
ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನಕ್ಕೆ ಅನುಕೂಲ: ಬದುಕಿದ್ದಾಗ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡಿದ್ದ ಗಿರಿಜಾ ಅವರು ಸಾವಿನಲ್ಲಿಯೂ ಸಾಮಾಜಿಕ ಕಳಕಳಿ ಮೆರೆದಿದ್ದಾರೆ. ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನಕ್ಕೆ ಅನುಕೂಲವಾಗಲಿ ಎನ್ನುವ ಕಾರಣಕ್ಕೆ ತಮ್ಮ ದೇಹವನ್ನೇ ದಾನ ಮಾಡಿ ಇಹಲೋಕ ತ್ಯಜಿಸಿದ್ದಾರೆ.
ಓದಿ: ಬೆಂಗಳೂರಿನಲ್ಲಿ ಬೀದಿ ನಾಯಿ ಮೇಲೆ ಹರಿದ ಕಾರು: ಸಿಸಿಟಿವಿಯಲ್ಲಿ ದೃಶ್ಯ ಸೆರೆ