ಹುಬ್ಬಳ್ಳಿ: ರಾಜ್ಯದಾದ್ಯಂತ 6ನೇ ವೇತನ ಆಯೋಗ ಜಾರಿಯಾಗಬೇಕು ಎಂದು ಆಗ್ರಹಿಸಿ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿದ್ದರೆ, ಇತ್ತ ಅವರ ಕುಟುಂಬಸ್ಥರು ಭೀತಿಯಲ್ಲಿ ಕಾಲ ಕಳೆಯುವಂತಾಗಿದೆ. ಕರ್ತವ್ಯಕ್ಕೆ ಗೈರಾಗಿ ಮುಷ್ಕರ ನಡೆಸುತ್ತಿರುವ ನೌಕರರ ಮನೆಗಳಿಗೆ ಅಧಿಕಾರಿಗಳು ನೋಟಿಸ್ ಅಂಟಿಸುತ್ತಿದ್ದು, ಮನೆ ಖಾಲಿ ಮಾಡಿ, ಇಲ್ಲವೇ ಕರ್ತವ್ಯಕ್ಕೆ ಹಾಜರಾಗಿ ಎಂದು ನೋಟಿಸ್ನಲ್ಲಿ ತಿಳಿಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಹುಬ್ಬಳ್ಳಿ ಗೋಕುಲ ರಸ್ತೆಯಲ್ಲಿರುವ ಕೆಎಸ್ಆರ್ಟಿಸಿ ವಸತಿ ಗೃಹಗಳಿಗೆ ನೋಟಿಸ್ ನೀಡಿದ ಬೆನ್ನಲ್ಲೇ ಕುಟುಂಬಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಮನೆ ಮನೆಗೆ ಭೇಟಿ ನೀಡಿ ನೋಟಿಸ್ ನೀಡುತ್ತಿರುವ ಸಾರಿಗೆ ಇಲಾಖೆ ಹಿರಿಯ ಅಧಿಕಾರಿಗಳು, ಮನೆಯ ಬಾಗಿಲಿಗೆ ನೋಟಿಸ್ ಅಂಟಿಸುತ್ತಿದ್ದಾರೆ. ಕೆಲಸಕ್ಕೆ ಹಾಜರಾಗದಿದ್ದರೆ ವಸತಿ ಗೃಹ ಹಂಚಿಕೆ ರದ್ದು ಮಾಡಲಾಗುತ್ತೆ ಎಂದ ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ.
ಇದರಿಂದ ಆತಂಕಗೊಂಡಿರುವ ಕುಟುಂಬದ ಸದಸ್ಯರು, ನಮ್ಮ ಮನೆಯವರು ಕಳೆದ ಎರಡು ದಿನದಿಂದ ಮನೆಗೆ ಬಂದಿಲ್ಲ. ಈ ಸಂದರ್ಭದಲ್ಲಿ ನಮಗೆ ಒತ್ತಾಯಪೂರ್ವಕವಾಗಿ ನೋಟಿಸ್ಗೆ ಸಹಿ ಹಾಕಿಸಿಕೊಂಡು ಹೋಗಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಮುಷ್ಕರ ಬಿಟ್ಟು ಸೇವೆಗೆ ಹಾಜರಾಗುವ ಸಿಬ್ಬಂದಿಗೆ ರಕ್ಷಣೆ: ಬಸವರಾಜ್ ಬೊಮ್ಮಾಯಿ