ಹುಬ್ಬಳ್ಳಿ : ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮುಂಬೈ ಕರ್ನಾಟಕ ಭಾಗದ ಜನರ ಜೀವನಾಡಿ. ಧಾರವಾಡ, ಉತ್ತರಕನ್ನಡ, ಹಾವೇರಿ, ಗದಗ, ಬಾಗಲಕೋಟೆ, ವಿಜಯಪುರ, ಬೆಳಗಾವಿ ಜಿಲ್ಲೆಯ ವ್ಯಾಪ್ತಿಯಲ್ಲಿರುವ ಈ ಸಂಸ್ಥೆಯಿಂದ ನಿತ್ಯ 4600ಕ್ಕೂ ಹೆಚ್ಚು ಬಸ್ಗಳು ಸಂಚಾರ ಮಾಡ್ತಿದ್ದಾಗಲೇ ಪ್ರತಿದಿನವೂ ಎನ್‌ಡಬ್ಲ್ಯೂಕೆಎಸ್‌ಆರ್‌ಟಿಸಿ ಒಂದೂವರೆ ಕೋಟಿ ನಷ್ಟದಲ್ಲಿತ್ತು.
ಅದ್ಯಾವಾಗ ಕೋವಿಡ್ ಅಬ್ಬರ ಶುರುವಾದ ಮೇಲೆ ಸಂಸ್ಥೆಯ ಆರ್ಥಿಕ ಸ್ಥಿತಿಗತಿ ಮತ್ತಷ್ಟು ಬಿಗಡಾಯಿಸಿ ಬಿಟ್ಟಿತ್ತು. ಮೊದಲ ಲಾಕ್ಡೌನ್ ಮುಗಿದ ಮೇಲೆ ನಡೆದ ನೌಕರರ ಸಾಲು ಸಾಲು ಮುಷ್ಕರಗಳಿಂದ ಆರ್ಥಿಕ ನಷ್ಟ ಹೆಚ್ಚಾಗಿದ್ದಾಗಲೇ ಮತ್ತೊಮ್ಮೆ ಅಬ್ಬರಿಸಿದ ಕೋವಿಡ್ ಎರಡನೇ ಅಲೆಯಿಂದ ಸಂಸ್ಥೆಯ ಆರ್ಥಿಕ ಸ್ಥಿತಿಗತಿ ಹದಗೆಟ್ಟು ಹೋಗಿದೆ.
55 ದಿನಗಳ ಎರಡನೇ ಅಲೆಯಲ್ಲಿ ₹221.75 ಕೋಟಿ ನಷ್ಟವಾಗಿದೆ. ಇನ್ನು, 14 ದಿನಗಳ ಸಾರಿಗೆ ನೌಕರರ ಮುಷ್ಕರದಿಂದ ₹66.03 ಕೋಟಿ ನಷ್ಟವಾಗಿದ್ರೆ, ಕೋವಿಡ್ ಮೊದಲ ಅಲೆಗೆ ಬರೋಬ್ಬರಿ ₹336.19 ಕೋಟಿ ನಷ್ಟ ಅನುಭವಿಸಿ, ಆರ್ಥಿಕವಾಗಿ ಚೇತರಿಸಿಕೊಳ್ಳಲಾಗದ ಸ್ಥಿತಿಗೆ ಬಂದು ತಲುಪಿದೆ.
ವಾಯವ್ಯ ಸಾರಿಗೆ ಸಂಸ್ಥೆ ಏಪ್ರಿಲ್ ತಿಂಗಳಲ್ಲಿ 12.9 ಕೋಟಿ, ಮೇ ತಿಂಗಳಲ್ಲಿ 224.98 ಕೋಟಿ, ಜೂನ್ ತಿಂಗಳಲ್ಲಿ 84.66 ಕೋಟಿ ನಷ್ಟ ಅನುಭವಿಸಿದೆ. ಅತಿ ಹೆಚ್ಚು ಆದಾಯ ಹೊಂದಿದ್ದ ಬಾಗಲಕೋಟೆ ವಿಭಾಗದಲ್ಲಿ 33.35 ಕೋಟಿ, ಬೆಳಗಾವಿ ವಿಭಾಗಕ್ಕೆ 31.56 ಕೋಟಿ, ಚಿಕ್ಕೊಡಿ ವಿಭಾಗಕ್ಕೆ 28.17 ಕೋಟಿ, ಹುಬ್ಬಳ್ಳಿ ಗ್ರಾಮೀಣ ವಿಭಾಗದಲ್ಲಿ 23.3 ಕೋಟಿ, ಬಿಆರ್ಟಿಎಸ್ ವಿಭಾಗದಲ್ಲಿ 11.47 ಕೋಟಿ ನಷ್ಟ ಅನುಭವಿಸಿದೆ.
ಮೊದಲೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ನಿವೃತ್ತ ನೌಕರರ ಪಿಂಚಣಿ ನೀಡಲು ಆಗದೆ ಹೆಣಗಾಡುತ್ತಿದ್ದ ಸಂಸ್ಥೆ ತನ್ನ ವಿವಿಧ ಆಸ್ತಿ, ಬಸ್ಗಳನ್ನ ಅಡವಿಟ್ಟು ಸಾಲ ಪಡೆದು ಅಲ್ಪಪ್ರಮಾಣದ ಆರ್ಥಿಕ ಸಂಕಷ್ಟದಿಂದ ಪಾರಾಗಲು ಮುಂದಾಗಿದ್ದಾಗಲೇ ಎರಡನೇ ಅಲೆ ಮತ್ತು ನೌಕರರ ಮುಷ್ಕರ ಎಲ್ಲವನ್ನ ಬುಡಮೇಲು ಮಾಡಿಟ್ಟಿದೆ.
ಕೋವಿಡ್ ಎರಡನೇ ಅಲೆಯ ಬಳಿಕ ಮತ್ತೆ ಬಸ್ ಸಂಚಾರ ಆರಂಭವಾಗಿದೆ. ಆದ್ರೆ, ಹೆಚ್ಚಿನ ಸಂಖ್ಯೆಯಲ್ಲಿ ಬಸ್ಗಳು ರಸ್ತೆಗಿಳಿದಿಲ್ಲ. ಪ್ರಯಾಣಿಕರ ಸಂಖ್ಯೆಯೂ ಕಡಿಮೆಯಾಗಿದೆ. ಆರ್ಥಿಕ ನಷ್ಟವನ್ನ ಹೇಗೆ ಸರಿದೂಗಿಸುವುದು ಎನ್ನುವುದೇ ಅಧಿಕಾರಿಗಳಿಗೆ ತಲೆನೋವಾಗಿದೆ.