ಹುಬ್ಬಳ್ಳಿ: ಧಾರವಾಡದ ಎಸ್ಡಿಎಂ ಕಾಲೇಜಿನಲ್ಲಿ ಸೋಂಕು ಹೆಚ್ಚಳವಾದ ಹಿನ್ನೆಲೆಯಲ್ಲಿ ಜಿನ್ಯೂಂ ಸಿಕ್ವೇನ್ಸ್ ಟೆಸ್ಟ್ ಮಾಡಿಸಲು ಸ್ಯಾಂಪಲ್ಗಳನ್ನು ಕಳುಹಿಸಿ ಕೊಡಲಾಗಿತ್ತು. ವರದಿ ಕಳೆದ ರಾತ್ರಿ ಬಂದಿದ್ದು, ಯಾರಿಗೂ ಪಾಸಿಟಿವ್ ಬಂದಿಲ್ಲ. ಜನರು ಆತಂಕಪಡುವ ಅಶವ್ಯಕತೆ ಇಲ್ಲ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಹೇಳಿದರು.
ನಗರದ ವಿಮಾನ ನಿಲ್ದಾಣದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಮನೆ ಮನೆಗೆ ಹೋಗಿ ಲಸಿಕೆ ವಿತರಣೆ ಮಾಡುತ್ತಿದ್ದೇವೆ. ಎರಡುವರೆ ಲಕ್ಷ ಲಸಿಕೆ ನಮ್ಮ ಬಳಿ ಲಭ್ಯವಿದೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ನಿನ್ನೆ 4 ಜನರಿಗೆ ಪಾಸಿಟಿವ್ ಬಂದಿದೆ. ಅವರಲ್ಲಿ ಯಾರು ವಿದ್ಯಾರ್ಥಿಗಳಿಲ್ಲ. ಧಾರವಾಡದಲ್ಲಿ ಹೊಸದಾಗಿ ಇಬ್ಬರಿಗೆ ಸೋಂಕು ತಗುಲಿದೆ ಎಂದರು.
ಇನ್ನೂ ಧಾರವಾಡದ ಎಸ್ಡಿಎಂ ಆಸ್ಪತ್ರೆಯ ಸುತ್ತಲಿನ ಶಾಲಾ-ಕಾಲೇಜುಗಳನ್ನು ಮತ್ತೆ ನಾಳೆಯಿಂದ ಆರಂಭ ಮಾಡುತ್ತೇವೆ. ಜಿಲ್ಲೆಯಲ್ಲಿ ವಾಣಿಜ್ಯ ವ್ಯವಹಾರಗಳಿಗೆ ನಿರ್ಬಂಧ ಹೇರಲ್ಲ. ನಿರ್ಬಂಧ ಹೇರಲು ಅವಕಾಶ ಇಲ್ಲ. ಧಾರವಾಡ ಜಿಲ್ಲೆಯಲ್ಲಿ ಪ್ರತಿನಿತ್ಯ ಸಾವಿರ ಜನರಿಗೆ ಟೆಸ್ಟ್ ಮಾಡುತ್ತಿದ್ದೇವೆ ಎಂದರು.
ಎಸ್ಡಿಎಂ ಕಾಲೇಜು ಆವರಣದಲ್ಲಿರುವ ಕಲ್ಯಾಣ ಮಂಟಪದಲ್ಲಿ ಮದುವೆಗೆ ಅವಕಾಶ ಕಲ್ಪಿಸಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಜಿಲ್ಲಾಡಳಿತ ಯಾರ ಒತ್ತಡಕ್ಕೂ ಮಣಿದು ಅವಕಾಶ ನೀಡಿಲ್ಲ. ತಜ್ಞರ ಸಲಹೆ ಪಡೆದು ಕೋವಿಡ್ ನಿಯಮ ಪಾಲಿಸಿ ಮದುವೆಗೆ ಅವಕಾಶ ನೀಡಲಾಗಿದೆ ಎಂದರು.
ಇದನ್ನೂ ಓದಿ : ಯಡಿಯೂರಪ್ಪ ಪ್ರಚಾರ ಯಾವುದೇ ಪರಿಣಾಮ ಬೀರಲ್ಲ: ಆರ್. ಪ್ರಸನ್ನ ಕುಮಾರ್