ಹುಬ್ಬಳ್ಳಿ : ಕೊರೊನಾ ಬಗ್ಗೆ ಭಯ ಬೇಡ. ಆದರೆ, ಎಚ್ಚರಿಕೆ ಅಗತ್ಯ. ಸಣ್ಣ ಅಜಾಗರೂಕತೆಯೂ ನಮ್ಮನ್ನು ತೊಂದರೆಗೆ ಸಿಲುಕಿಸುತ್ತದೆ ಎಂದು ಕೋವಿಡ್‌ನಿಂದ ಗುಣಮುಖರಾಗಿರುವ ಆಯುಷ್ ವೈದ್ಯ ರವೀಂದ್ರ ವೈ ಹೇಳಿದ್ದಾರೆ.
ಹುಬ್ಬಳ್ಳಿಯ ಮಂಟೂರು ರಸ್ತೆಯಲ್ಲಿ ರವೀಂದ್ರ ಅವರು ಆಯುಷ್ ಕ್ಲಿನಿಕ್ ಹೊಂದಿರುವ ಇವರು, ಸೋಂಕಿತ ವ್ಯಕ್ತಿಯೊಬ್ಬರಿಗೆ ಚಿಕಿತ್ಸೆ ನೀಡಿದ್ದರು. ಹಾಗಾಗಿ ಇವರಿಗೂ ಸೋಂಕು ದೃಢಪಟ್ಟಿತ್ತು. ಇನ್ನೂ ಚಿಕಿತ್ಸೆ ನೀಡಿದ್ದ ವ್ಯಕ್ತಿಗೆ ಸೋಂಕಿರುವುದು ಗೊತ್ತಾದ ನಂತರ ಸೋಂಕಿನ ಲಕ್ಷಣ ಇಲ್ಲದಿದ್ದರೂ ಗಂಟಲು, ಮೂಗಿನ ದ್ರವ ಪರೀಕ್ಷೆಗೆ ಕೊಟ್ಟಿದ್ದರು. ಇವರು ಊಹಿಸಿದಂತೆ ಸೋಂಕು ತಗುಲಿರೋದು ದೃಢಪಟ್ಟಿತ್ತು.
ಈ ಬಗ್ಗೆ ಮಾತನಾಡಿರುವ ಅವರು, ನನ್ನ ಮಗ ಭಯದಿಂದ ಕೋಣೆಯೊಳಗೆ ಬಚ್ಚಿಟ್ಟುಕೊಂಡು ಹತ್ತಿರ ಬಾರದೇ ಇರುವುದು ಬೇಸರವಾಗಿತ್ತು. ಆದರೆ, ಮಗ ಕೋವಿಡ್ ಬಗೆಗೆ ಪ್ರಸಾರವಾಗುವ ಸುದ್ದಿ ನೋಡಿ ನನಗೆ ಕೊರೊನಾ ಭೂತ ಮೆಟ್ಟಿಕೊಂಡಿದೆ ಎಂದು ಭಾವಿಸಿದ್ದ. ಇದಕ್ಕೆ ಮಾಧ್ಯಮಗಳು ಕೊರೊನಾ ಬಗ್ಗೆ ತೋರಿಸುತ್ತಿರುವ ಸುದ್ದಿಗಳೇ ಕಾರಣ. ಸಾವು ನೋವಿನ ದೃಶ್ಯ ಪದೇಪದೆ ತೋರಿಸುವುದು ಎಲ್ಲರ ಮನಸ್ಸಿನ ಮೇಲೆ ಭಾರಿ ಪರಿಣಾಮ ಬೀರುತ್ತಿದೆ ಎಂದು ಹೇಳಿದರು.
ಕೊರೊನಾ ದೊಡ್ಡ ರೋಗವೇನಲ್ಲ. ಎಚ್ಚರದಿಂದಿದ್ದರೆ ಅದು ನಮ್ಮ ಹತ್ತಿರ ಸುಳಿಯುವುದೂ ಇಲ್ಲ ಎಂದ ಅವರು, ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ ನಾನು ಮನೆಯಲ್ಲೇ ಕ್ವಾರಂಟೈನ್ ಆಗಲು ನಿರ್ಧಾರ ಮಾಡಿದ್ದೆ. ಆದರೆ, ಮನೆಯವರಿಗೆ ಯಾವುದೇ ರೀತಿ ತೊಂದರೆಯಾಗಬಾರದು ಎಂದು ಸಂಜೀವಿನಿ ಕೋವಿಡ್ ಕೇರ್ ಸೆಂಟರ್‌ಗೆ ಹೋಗಿ ಚಿಕಿತ್ಸೆ ಪಡೆದು ಸೋಂಕಿನಿಂದ ಗುಣಮುಖನಾಗಿ ಬಂದಿದ್ದೇನೆ. ಕುಟುಂಬದವರಿಂದ ಹತ್ತು ದಿನ ದೂರವಿರಬೇಕೆಂಬ ಕಾರಣಕ್ಕೆ ಸಣ್ಣ ಆತಂಕ ಇತ್ತು. ಆದರೆ, ಅದು ಒಂದೆರಡು ದಿನಗಳಲ್ಲೇ ದೂರವಾಯಿತು.
ಸಂಜೀವಿನಿ ಕೋವಿಡ್ ಕೇರ್ ಸೆಂಟರ್ನಲ್ಲಿ ಪೌಷ್ಟಿಕ ಆಹಾರ ಜೊತೆಗೆ ಕುಡಿಯಲು ಬಿಸಿ ನೀರು, ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮಾತ್ರೆ ಹಾಗೂ ಕಷಾಯ ಕೊಟ್ಟರು. ಚಿಕಿತ್ಸೆ ಜೊತೆಗೆ ಯೋಗಾಭ್ಯಾಸ, ಸೂರ್ಯ ನಮಸ್ಕಾರ, ದಿನಕ್ಕೆರಡು ಸಲ ಸ್ನಾನ ಹಾಗೂ ದೇವರ ಪ್ರಾರ್ಥನೆ ಮಾಡಲಾಗುತ್ತಿತ್ತು ಅಂತಾ ವೈದ್ಯ ರವೀಂದ್ರ ಅವರು ತಿಳಿಸಿದ್ದಾರೆ. ಅಷ್ಟೇ ಅಲ್ಲ, 14 ದಿನ ಹೋಮ್ ಕ್ವಾರಂಟೈನ್‌ನಲ್ಲಿರುವ ಇವರು ಈಗ ವಿಡಿಯೋ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.