ಹುಬ್ಬಳ್ಳಿ: ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂದು ಕರೆಸಿಕೊಳ್ಳುವ ಧಾರವಾಡ ಜಿಲ್ಲೆಯಲ್ಲಿ ಪ್ರಮುಖ ಎರಡು ತಾಲೂಕುಗಳಾದ ಅಳ್ನಾವರ ಮತ್ತು ನವಲಗುಂದ ತಾಲೂಕಿನಲ್ಲಿ ಮಾತ್ರ ಅಗ್ನಿಶಾಮಕ ಠಾಣೆಗಳಿಲ್ಲ. ಇದರಿಂದ ತಾಲೂಕಿನಲ್ಲಿ ಯಾವುದೇ ಅಗ್ನಿ ಅವಘಡಗಳು ಸಂಭವಿಸಿದರೆ ಯಾರು ಹೊಣೆ ಎಂಬ ಪ್ರಶ್ನೆ ಉದ್ಭವಿಸಿದೆ.
ನವಲಗುಂದ ತಾಲೂಕಿನಲ್ಲಿ ಈ ಹಿಂದೆ ಅಗ್ನಿಶಾಮಕ ಠಾಣೆ ಮಂಜೂರಾಗಿತ್ತು. ಆದರೆ ಅವಶ್ಯಕವಾಗಿದ್ದ ಎರಡು ಎಕರೆ ಜಮೀನು ಸಿಗದಿರುವ ಕಾರಣ ನವಲಗುಂದದಲ್ಲಿ ಸ್ಥಾಪನೆ ಆಗಬೇಕಿದ್ದ ಠಾಣೆಯನ್ನು ಅಣ್ಣಿಗೇರಿ ಎಪಿಎಂಸಿ ಸ್ಥಳಾಂತರ ಮಾಡಬೇಕಾಯಿತು. ನವಲಗುಂದ ತಾಲೂಕಿನಲ್ಲಿ ಎಲ್ಲಾದ್ರೂ ಅಗ್ನಿ ದುರಂತ ಸಂಭವಿಸಿದರೆ ರಕ್ಷಣಾ ಕಾರ್ಯಾಚರಣೆ ನಡೆಸಲು ಅಣ್ಣಿಗೇರಿ ಹಾಗೂ ಅಮರಗೋಳದ ಸಿಬ್ಬಂದಿಯೇ ಹೋಗಬೇಕಾಗಿದೆ.
ಇನ್ನು ಹೊಸ ತಾಲೂಕು ಅಳ್ನಾವರದಲ್ಲಿ ಸುಮಾರು ಮೂರು ವರ್ಷಗಳಿಂದ ಜಾಗಕ್ಕಾಗಿ ಹುಡುಕಾಟ ನಡೆದಿದೆ. ಆದರೆ ಯಾವುದೇ ದಾನಿಗಳು ಮುಂದೆ ಬರುತ್ತಿಲ್ಲ. ಜೊತೆಗೆ ಜಾಗವೂ ಕೂಡ ಸಿಗುತ್ತಿಲ್ಲ. ಈ ತಾಲೂಕಿನಲ್ಲಿ ಪದೇ ಪದೇ ಕಬ್ಬಿನ ಗದ್ದೆಗಳಿಗೆ ಬೆಂಕಿ ಹತ್ತಿಕೊಳ್ಳುವುದರಿಂದ ಈ ತಾಲೂಕಿಗೆ ಅಗ್ನಿಶಾಮಕ ಠಾಣೆ ಅವಶ್ಯಕತೆ ಹೆಚ್ಚಿದೆ.