ಹುಬ್ಬಳ್ಳಿ: ರಾಷ್ಟ್ರೀಯ ಬಸವ ಕೃಷಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಜ.14 ರಂದು ಬೆಳಗ್ಗೆ 11 ಕ್ಕೆ ಬಾಗಲಕೋಟೆ ಜಿಲ್ಲೆಯ ಕೂಡಲ ಸಂಗಮದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕೂಡಲ ಸಂಗಮ ಪಂಚಮಸಾಲಿ ಮಠದ ಪೀಠಾಧ್ಯಕ್ಷ ಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.
ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠ, ಅಖಿಲ ಭಾರತ ಪಂಚಮಸಾಲಿ ಸಮಾಜ ಟ್ರಸ್ಟ್ ವತಿಯಿಂದ ಕೃಷಿಯಲ್ಲಿ ಸಾಧನೆ ಗೈದವರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ರೈತ ಬಾಂಧವರನ್ನು ಪ್ರೋತ್ಸಾಹಿಸುವುದು, ಸಾರ್ವಭೌಮ ಗೌರವ ಸಿಗಬೇಕು ಎಂಬ ಉದ್ದೇಶದಿಂದ ಅಂದಿನ ರಾಷ್ಟ್ರಪತಿಯಾಗಿದ್ದ ಅಬ್ದುಲ್ ಕಲಾಂ ಅವರ ಸಲಹೆ ಮೇರೆಗೆ 2012 ರಿಂದ ಧಾರ್ಮಿಕ ಮಠ ಪೀಠಗಳ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಕೃಷಿಕರ ಹೆಸರಿನಲ್ಲಿ ರಾಷ್ಟ್ರ ಪ್ರಶಸ್ತಿಯನ್ನು ಕೊಡಲಾಗುತ್ತಿದೆ ಎಂದರು.
ಕಳೆದ ವರ್ಷ ಕೃಷಿಕರ ಧ್ವನಿಯಾಗಿ ಕೆಲಸ ಮಾಡಿದ ಎಮ್.ಎಸ್.ಸ್ವಾಮಿನಾಥನ್ ಅವರಿಗೆ ಪ್ರಶಸ್ತಿ ಕೊಡಲಾಗಿದ್ದು, ಈ ವರ್ಷದ ಪ್ರಶಸ್ತಿಯನ್ನು ಏತ ನೀರಾವರಿ ನೀರಾವರಿ ಯೋಜನೆಯ ಹರಿಕಾರ ಹಾಗೂ ರೈತ ಹಕ್ಕುಗಳ ಹೋರಾಟಗಾರ ತೆಲಂಗಾಣ ರಾಜ್ಯ ಸರ್ಕಾರದ ಜಲ ಸಂಪನ್ಮೂಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಪ್ರಕಾಶರಾವ್ ವೀರಗಲ್ಲ ಅವರಿಗೆ ಕೊಡಲಾಗುತ್ತಿದೆ ಎಂದರು.
ಇನ್ನೂ ಅಂದು ಕೃಷಿ ಹಾಗೂ ಉತ್ತರ ಕರ್ನಾಟಕದ ಸಮಗ್ರ ನೀರಾವರಿಗೆ ಒತ್ತಾಯಿಸಿ ಬೃಹತ್ ರೈತ ಸಂವಾದ ಹಾಗೂ 10 ನೇ ಕೃಷಿ ಸಂಕ್ರಾಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ವೇಳೆ ಪ್ರಶಸ್ತಿ ಸ್ವೀಕಾರ ಮಾಡಲಿರುವ ಪ್ರಕಾಶರಾವ ವೀರಗಲ್ಲ ರೈತರೊಂದಿಗೆ ಸಂವಾದ ನಡೆಸುವ ಜೊತೆಗೆ ನೀರಾವರಿ ಕುರಿತು ಜಾಗೃತಿ ಮೂಡಿಸಲಿದ್ದಾರೆ ಎಂದರು.
ಲಿಂಗಾಯತ ಮೀಸಲಾತಿಗೆ ಬೆಂಬಲ:
ಲಿಂಗಾಯತ ಮೀಸಲಾತಿಯಲ್ಲಿ ನಮ್ಮದು ಸಂಪೂರ್ಣ ಬೆಂಬಲವಿದ್ದು, ಮಹಾರಾಷ್ಟ್ರದಲ್ಲಿ ಹೇಗೆ ಮರಾಠರಿಗೆ ಮೀಸಲಾತಿ ಕಲ್ಪಿಸಲಾಗಿದೆ. ಅದೇ ರೀತಿ ಕರ್ನಾಟಕದಲ್ಲಿ ಲಿಂಗಾಯತರಿಗೆ ಮೀಸಲಾತಿ ಕೊಡಬೇಕು ಎಂದರು.