ಧಾರವಾಡ /ಹುಬ್ಬಳ್ಳಿ: ವಿಧಾನ ಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಅನಾರೋಗ್ಯ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಜೋಶಿ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಎರಡು ಬಾರಿ ಅವರನ್ನು ಸಂಪರ್ಕ ಮಾಡಲು ಪ್ರಯತ್ನ ಮಾಡಿದ್ದೇನೆ. ಅವರ ಮೊಬೈಲ್ ಆಫ್ ಇದೆ ಎರಡು ದಿನದ ಹಿಂದೆ ಅವರ ಅನಾರೋಗ್ಯದ ಬಗ್ಗೆ ನನಗೆ ಗೊತ್ತಾಗಿದೆ ಎಂದು ಹೇಳಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅವರು ಶೀಘ್ರವಾಗಿ ಗುಣಮುಖರಾಗಲಿ. ಅವರು ನನಗೆ ಅತ್ಯಂತ ಆತ್ಮೀಯ ಸ್ನೇಹಿತ. ಸಾಮಾಜಿಕ ಜಾಲತಾಣದಲ್ಲಿ ಅವರ ಬಗ್ಗೆ ಯಾರೋ ತಪ್ಪು ಮಾಹಿತಿ ಹಾಕುತಿದ್ದಾರೆ. ಈ ಬಗ್ಗೆ ಅವರೇ ಸ್ಪಷ್ಟನೆ ನೀಡಿದ್ದಾರೆ. ಭಗವಂತನಲ್ಲಿ ಅವರು ಆರೋಗ್ಯ ಸುಧಾರಿಸಿ ಬರಲಿ ಎಂದು ಪ್ರಾರ್ಥನೆ ಮಾಡಬಹುದು ಅವರ ವದಂತಿ ಹಬ್ಬಿಸಬಾರದು ಎಂದರು.
ಉಮೇಶ ಕತ್ತಿ ನಿಧನ ವಿಚಾರಕ್ಕೆ ಮಾತನಾಡಿದ ಅವರು, ಉತ್ತರ ಕರ್ನಾಟಕದ ಬಗ್ಗೆ ಕಳಕಳಿ ಇದ್ದಂತ ವ್ಯಕ್ತಿ. ಅಗಲಿಕೆಯಿಂದ ನಮ್ಮ ಪಕ್ಷ ಹಾಗೂ ಆ ಭಾಗಕ್ಕೆ ಹಾನಿಯಾಗಿದೆ. ಅವರ ಜಾಗಕ್ಕೆ ಒಳ್ಳೆ ಕಾರ್ಯಕರ್ತರನ್ನು ಹುಡುಕುತ್ತೇವೆ. ಕತ್ತಿ ಅವರು ಅಭಿವೃದ್ಧಿ ವಿಷಯದಲ್ಲಿ ಒಳ್ಳೆ ಕೆಲಸ ಮಾಡಿದ್ದಾರೆ. ಅವರ ರೀತಿಯ ಆಡಳಿತಗಾರರನ್ನು ಹುಡುಕುತ್ತೇವೆ ಎಂದರು.
ಇದನ್ನೂ ಓದಿ : ಆನಂದ ಮಾಮನಿ ವಿಡಿಯೋ ಹೇಳಿಕೆ ಬಿಡುಗಡೆ: ವದಂತಿಗಳಿಗೆ ಕಿವಿಗೊಡದಂತೆ ಮನವಿ
ಬೆಂಗಳೂರಿನಲ್ಲಿ ರಾಜಕಾಲುವೆ ಒತ್ತುವರಿ ತೆರವು ವಿಚಾರದಲ್ಲಿ ಸಿಎಂ ಜೊತೆಗೆ ಮಾತನಾಡಿದ್ದೇನೆ. ತೆರವು ಕಾರ್ಯಚರಣೆಯಲ್ಲಿ ಯಾವುದೇ ತಾರತಮ್ಯವಿಲ್ಲ. ಆ ರೀತಿ ಕಂಡು ಬಂದಲ್ಲಿ ಬಿಬಿಎಂಪಿಗೆ ದೂರು ನೀಡಲಿ. ಸರ್ಕಾರ ಮತ್ತು ಬಿಬಿಎಂಪಿ ಸೂಕ್ತ ಕ್ರಮ ಜರುಗಿಸುತ್ತದೆ ಎಂದು ರಾಜಕಾಲುವೆ ತೆರವಿನ ಕುರಿತಾಗಿ ಪ್ರತಿಕ್ರಿಯಿಸಿದರು.
ಪ್ರಧಾನಿ ನರೇಂದ್ರ ಮೋದಿ ಹುಟ್ಟು ಹಬ್ಬ ಹಿನ್ನೆಲೆಯಲ್ಲಿ ರಕ್ತದಾನ: ನರೇಂದ್ರ ಮೋದಿ ಅವರ ಜನ್ಮ ದಿನದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ರಾಷ್ಟ್ರೋತ್ಥಾನ ರಕ್ತನಿಧಿಯಲ್ಲಿ ಪ್ರಹ್ಲಾದ್ ಜೋಶಿ ರಕ್ತದಾನ ಮಾಡಿದರು. ನಂತರ ಮಾತನಾಡಿದ ಅವರು, ದೇಶ ಕಂಡ ಅಪ್ರತಿಮ ರಾಜಕಾರಣಿ, ದೇಶದ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ತಂದಿರುವ ಪ್ರಧಾನಿ ಸ್ವಚ್ಛ, ಸುಸ್ಥಿರ ಸಮರ್ಥ ಆಡಳಿತ, ಸುಶಾಸನ ಕೊಟ್ಟವರು. ಕೆಲವೊಮ್ಮೆ ರಾಜಕೀಯವಾಗಿ ನಮ್ಮ ಹಿತಕ್ಕೆ ಇಲ್ಲದಾಗಲೂ ಸಹ ದೇಶದ ಗಮನ ಇಟ್ಟುಕೊಂಡು ಕಠೋರ ನಿರ್ಣಯ ತೆಗೆದುಕೊಂಡು ಭ್ರಷ್ಟಾಚಾರ ಮುಕ್ತ ಆಡಳಿತ ಕೊಟ್ಟವರು ಮೋದಿ. ಅವರ ಈ ಜನ್ಮದಿನದಂದು ಅನೇಕರು ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದರು.
ಕೇಂದ್ರ ಸಚಿವರಿಗೆ ಮಾಜಿ ಸಿ ಎಂ ಜಗದೀಶ ಶೆಟ್ಟರ್ ಹಾಗೂ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಸಾಥ್ ನೀಡಿದರು.
ಇದನ್ನೂ ಓದಿ : ಪ್ರಧಾನಿ ನರೇಂದ್ರ ಮೋದಿ 72ನೇ ವರ್ಷದ ಹುಟ್ಟುಹಬ್ಬ: ನೀವು ನಮ್ಮ ಪರಂಪರೆಯ ಪ್ರತೀಕ ಎಂದ ಸೆಲೆಬ್ರಿಟಿಗಳು