ಹುಬ್ಬಳ್ಳಿ : ಕಾಂಗ್ರೆಸ್ ಪಕ್ಷಕ್ಕೆ ಒಂದು ನಾಲಿಗೆಯಿಲ್ಲ, ಎರಡು ನಾಲಿಗೆ ಇದೆ. ಅವರು ರಾಷ್ಟ್ರದ ಹಿತ ಬಿಟ್ಟು ವೋಟ್ ಬ್ಯಾಂಕ್ ರಾಜಕೀಯ ಮಾಡುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೌರತ್ವ ಕಾಯ್ದೆ ಬಗ್ಗೆ ಚರ್ಚೆ ನಡೆಯುತ್ತಿದೆ. ಇದನ್ನು ಕಾಂಗ್ರೆಸ್ ಮೊದಲನೆಯದಾಗಿ ಸ್ವಾಗತ ಮಾಡಬೇಕಾಗಿತ್ತು. ನೆಹರು ತಂದಿರುವ ಕಾಯ್ದೆಯನ್ನು ಕಾಂಗ್ರೆಸ್‌ನವರು ವಿರೋಧ ಮಾಡ್ತಾ ಇದ್ದಾರೆ ಎಂದರು.
ಈ ಕಾಯ್ದೆ ಈ ಹಿಂದೆ ಸಂಸತ್ತಿನಲ್ಲಿ 5 ಬಾರಿಗೆ ತಿದ್ದುಪಡಿ ಆಗಿದೆ. ನೆಹರು, ರಾಜೀವ್ ಗಾಂಧಿ, ಇಂದಿರಾ ಗಾಂಧಿ ಸ್ವಾಗತ ಮಾಡಿದ್ದರು. ಆದರೆ ಈಗ ಇದೇ ಕಾಂಗ್ರೆಸ್ ಈಗ ವಿರೋಧ ಮಾಡುತ್ತಿರುವುದನ್ನು ನೋಡಿದರೆ ಅಸಹ್ಯ ಬರುತ್ತದೆ ಎಂದು ಕಿಡಿ ಕಾರಿದ್ರು.
ಇನ್ನು ಪೌರತ್ವ ತಿದ್ದುಪಡಿ ಕಾಯಿದೆಯನ್ನು ಮಮತಾ ಬ್ಯಾನರ್ಜಿಯವರು ಈ ಹಿಂದೆ ಸ್ವಾಗತಿಸಿದ್ದು ಇವತ್ತು ವಿರೋಧ ಮಾಡ್ತಾ ಇದ್ದಾರೆ. ಅವತ್ತು ಪರವಾಗಿ ಇದ್ದವರು ಇವತ್ತು ವಿರೋಧ ಮಾಡ್ತಿದ್ದಾರೆ. ಇದಕ್ಕೆಲ್ಲಾ ಕಾರಣ ರಾಜಕೀಯ ಎಂದರು.
ವಿ.ಎಸ್.ಉಗ್ರಪ್ಪ ಅವರು ನರೇಂದ್ರ ಮೋದಿ ಅಧುನಿಕ ಭಸ್ಮಾಸುರ ಎಂದು ಹೇಳಿಕೆ ನೀಡಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮೋದಿಯವರು ಅಧುನಿಕ ಸರ್ದಾರ್ ಪಟೇಲ್ ಎಂದು ತಿರುಗೇಟು ನೀಡಿದರು.
ಶಾಸಕ ಬಿ.ಸಿ ಪಾಟೀಲ್ ಸೇರಿದಂತೆ ಇತರರು ಸುದ್ದಿಗೋಷ್ಟಿಯಲ್ಲಿದ್ದರು.