ಧಾರವಾಡ: ಕೆಲವು ಮಾಧ್ಯಮಗಳು ಬಿಜೆಪಿ ಪರ ಪ್ರಚಾರ ಮಾಡುತ್ತಿವೆ. ಅಂತಹ ಮಾಧ್ಯಮಗಳ ಮೇಲೆ ಹಲ್ಲೆಯಾದ್ರೆ ನಮಗೆ ಸಂಬಂಧವಿಲ್ಲ ಎಂಬ ಮುಖ್ಯಮಂತ್ರಿ ಹೇಳಿಕೆ ವಿಚಾರಕ್ಕೆ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎನ್.ಹೆಚ್.ಕೊನರೆಡ್ಡಿ ಪ್ರತಿಕ್ರಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಚುನಾವಣೆ ನಡಿತಾ ಇದೆ. ಪ್ರಾದೇಶಿಕ ಪಕ್ಷಗಳ ಕಡೆಗೆ ಗಮನ ಕೊಡಿ ಎಂದು ನಿಮ್ಮನ್ನು ಓಲೈಸಲು ಮಾತನಾಡಿರಬಹುದು. ಅದು ಮಾಧ್ಯಮ ವಿರೋಧಿ ಹೇಳಿಕೆಯಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಮಾಧ್ಯಮಗಳ ಮೇಲೆ ವಿಶೇಷ ಕಾಳಜಿ ಹಾಗೂ ಗೌರವ ಇದೆ ಎಂದಿದ್ದಾರೆ.
ನಾನು ಚುನಾವಣೆಯ ಪ್ರಚಾರದಲ್ಲಿದ್ದೇನೆ. ಕುಮಾರಸ್ವಾಮಿ ಅವರು ಯಾವ ಅರ್ಥದಲ್ಲಿ ಹೇಳಿದಾರೋ ನನಗೆ ಗೊತ್ತಿಲ್ಲ. ಎಲ್ಲಾ ಮಾಧ್ಯಮಗಳಿಗೂ ಹೀಗೆ ಅಂದಿಲ್ಲ. ಕೆಲವು ಮಾಧ್ಯಮಗಳು ಎಂದಿದ್ದಾರೆ. ನೀವು ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ. ನಿಮ್ಮ ಪರವಾಗಿ ನಾವಿದ್ದೇವೆ. ಬೇರೆ ರಾಜ್ಯಗಳಲ್ಲಿ ಮಾಧ್ಯಮಗಳು ಪ್ರಾದೇಶಿಕ ಪಕ್ಷಗಳ ಪರವಾಗಿವೆ. ನಮ್ಮ ಪರವಾಗಿಯೂ ಸ್ವಲ್ಪ ತೋರಿಸಿ. ಸಣ್ಣ ಪುಟ್ಟ ಗೊಂದಲಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ ಎಂದು ಮನವಿ ಮಾಡಿದರು.
ನಮ್ಮ ಒಳ್ಳೆಯ ಕೆಲಸಗಳನ್ನು ಸಹ ಜನರಿಗೆ ತೋರಿಸಿ. ನಿಮಗೆ ಏನಾದ್ರು ಹೆಚ್ಚು ಕಡಿಮೆಯಾದ್ರೆ ನಾವೇ ಜವಾಬ್ದಾರಿ ತಗೆದುಕೊಳ್ಳುತ್ತೇವೆ. ನಾವು ಯಾರ ಬಗ್ಗೆಯು ಕೆಟ್ಟದಾಗಿ ಮಾತಾಡಲ್ಲ. ಮಂಡ್ಯದಲ್ಲಿಯೂ ಗ್ರೌಂಡ್ ರಿಯಾಲಿಟಿಯನ್ನು ಯಾರು ಹೇಳ್ತಾಯಿಲ್ಲ. ಇರೊದೇ ಒಂದು, ಹೇಳುತ್ತಿರೋದು ಇನ್ನೊಂದು ಎಂದು ಮಾಧ್ಯಮಗಳ ಮೇಲೆ ಅಸಮಾಧಾನ ವ್ಯಕ್ತಪಡಿಸಿದರು.
ಕೇವಲ ವಿರೋಧವಾಗಿ ಹೇಳುತ್ತಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ನಾವು ಯಾವಾಗಲು ಮಾಧ್ಯಮದವರ ಜೊತೆಗೆ ಇದ್ದೇವೆ. ಸಣ್ಣ ಪುಟ್ಟ ತಪ್ಪುಗಳನ್ನು ಸೀರಿಯಸ್ ಆಗಿ ತೆಗೆದುಕೊಳ್ಳಬೇಡಿ ಎಂದರು.