ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ನಿರಂತರ ನೀರು ಸರಬರಾಜು ವ್ಯವಸ್ಥೆಯಲ್ಲಿ ಅನಧಿಕೃತ ನಳಗಳು ಮಹಾನಗರ ಪಾಲಿಕೆಗೆ ತಲೆನೋವಾಗಿ ಪರಿಣಮಿಸಿವೆ. ಹೀಗಾಗಿ ಅವಳಿನಗರದಲ್ಲಿ ಅಕ್ರಮವಾಗಿ ಅಳವಡಿಸಿರುವ ಅನಧಿಕೃತ ನಳಗಳ ಸಂಪರ್ಕ ಕಡಿತ ಮಾಡಲು ಮಹಾನಗರ ಪಾಲಿಕೆ ದಿಟ್ಟ ಹೆಜ್ಜೆ ಇಟ್ಟಿದೆ.
ಮಹಾನಗರ ಪಾಲಿಕೆಯ 82 ವಾರ್ಡ್ಗಳಲ್ಲಿ 24/7 ನಿರಂತರ ನೀರು ಸರಬರಾಜು ಕಾಮಗಾರಿ ಕೊನೆ ಹಂತಕ್ಕೆ ತಲುಪಿದೆ. 1,207 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಜಾರಿ ಕಾಮಗಾರಿಯನ್ನು ಎಲ್ & ಟಿ ಕಂಪನಿಗೆ ಗುತ್ತಿಗೆ ನೀಡಿದೆ. ಎರಡು ವರ್ಷದಿಂದ ಕಾಮಗಾರಿ ನಡೆಯುತ್ತಿದ್ದು, ಇತ್ತೀಚೆಗೆ ಅನಧಿಕೃತ ನಳಗಳ ಸಮೀಕ್ಷೆ ನಡೆಸಲಾಗಿದೆ. ಅದರಲ್ಲಿ 30 ಸಾವಿರಕ್ಕೂ ಅಧಿಕ ನಳಗಳು ಅನಧಿಕೃತ ಎಂಬುದು ಸಾಬೀತಾಗಿದೆ. ಇದರಿಂದ ನೀರಿನ ಕರ ಸಂಗ್ರಹದಲ್ಲಿ ಶೇ 18 ರಿಂದ 20 ರಷ್ಟು ಆದಾಯ ಕೊರತೆ ಉಂಟಾಗಿದೆ.
ಇಂತಹ ಅನಧಿಕೃತ ನಳಗಳನ್ನು ಅಧಿಕೃತವಾಗಿ ಮಾಡಿಕೊಳ್ಳಲು ಪಾಲಿಕೆಯು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿದೆ. ಇದಕ್ಕೆ ಸಂಬಂಧಿಸಿದಂತೆ ಸೂಕ್ತ ಶುಲ್ಕವನ್ನು ಪಾವತಿಸಿ ಅಧಿಕೃತ ಮಾಡುವಂತೆ ಪಾಲಿಕೆ ಆಯುಕ್ತರು ಸೂಚನೆ ನೀಡಿದ್ದಾರೆ.
1ಲಕ್ಷದ 78 ಸಾವಿರಕ್ಕೂ ಹೆಚ್ಚು ಅಧಿಕೃತ ನಳ ಸಂಪರ್ಕ: ಅವಳಿನಗರದಲ್ಲಿ ಅಕ್ಟೋಬರ್ ಅಂತ್ಯದ ವೇಳೆಗೆ 1,78,496 ಅಧಿಕೃತ ನಳಗಳಿದ್ದು, ಅದರಲ್ಲಿ 17,209 ನಿರಂತರ, 44,490 ನಿತ್ಯ ನೀರು ಹಾಗೂ 1,16,797 ಅನಿಯಮಿತ ನೀರು ಸಂಪರ್ಕ ಹೊಂದಿವೆ. ಪ್ರತಿ ತಿಂಗಳು ನೀರಿನ ಕರ ಮೂಲಕ 5 ಕೋಟಿ ರೂ. ಆದಾಯ ಸಂಗ್ರಹ ಆಗಬೇಕಾಗಿದೆ. ಆದ್ರೆ 4.10 ರಿಂದ 4.20 ಕೋಟಿ ರೂ. ಮಾತ್ರ ಸಂದಾಯವಾಗುತ್ತಿದೆ. ಹೀಗೆ ಹಲವು ವರ್ಷಗಳಿಂದ ಬಾಕಿ ಉಳಿಸಿಕೊಂಡಿರುವ 169 ಕೋಟಿ. ರೂ. ವಸೂಲಿಯಾಗಬೇಕಿದೆ.
ಗ್ರಾಹಕರು ಅಧಿಕೃತ ಮಾಡಿಕೊಳ್ಳಲು ಮತ್ತೊಂದು ಅವಕಾಶ; ಮಹಾನಗರ ಪಾಲಿಕೆ ಅನಧಿಕೃತ ನಳಗಳನ್ನು ಹೊಂದಿರುವ ಗ್ರಾಹಕರು ಅಧಿಕೃತ ಮಾಡಿಕೊಳ್ಳಲು ಹೀಗಾಗಲೇ ಹಲವು ಬಾರಿ ಅವಕಾಶ ನೀಡಲಾಗಿದೆ. ಆದ್ರೂ ಮಹಾನಗರ ಪಾಲಿಕೆ ಗ್ರಾಹಕರ ಹಿತ ದೃಷ್ಟಿಯಿಂದ ಮತ್ತೊಂದು ಅವಕಾಶ ನೀಡಿದೆ. ಕಾಲಾವಧಿಯಲ್ಲಿ ಡಿ. 15 ರ ವರೆಗೆ ವಿಸ್ತರಣೆ ಮಾಡಲಾಗಿದೆ. ಅನಧಿಕೃತ ನಳಗಳ ಸಂಪರ್ಕದಾರರು ಸಂಬಂಧಪಟ್ಟ ಮಹಾನಗರ ಪಾಲಿಕೆ ವಲಯ ಕಚೇರಿಗಳಿಗೆ ಭೇಟಿ ನೀಡಿ ಸೂಕ್ತ ದಾಖಲೆಗಳ ಮೂಲಕ ನಿಗದಿ ಶುಲ್ಕ ಭರಿಸಲು ಮಹಾನಗರ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಸೂಚನೆ ನೀಡಿದ್ದಾರೆ.
ಯಾವುದಕ್ಕೆ ಎಷ್ಟು ಶುಲ್ಕ: ಮನೆ, ಅಪಾರ್ಟಮೆಂಟ್, ಸಗಟು ಸಂಪರ್ಕಕ್ಕೆ 8,797 ರೂ, ಗೃಹ ಇತರ ಸಂಪರ್ಕಕ್ಕೆ 16,727 ರೂ. ಹಾಗೂ ವಾಣಿಜ್ಯ ಸಂಪರ್ಕಕ್ಕೆ 27,190 ರೂ. ಶುಲ್ಕು ನಿಗದಿ ಮಾಡಲಾಗಿದೆ. ಇದರ ಹೊರತಾಗಿ ನಿರ್ಮಿತ ಪ್ರೋರೆಟ್ ಶುಲ್ಕ ಹಾಗೂ ರಸ್ತೆ ಅಗೆತ ಶುಲ್ಕ ಇರಲಿದೆ.
ಇದನ್ನೂಓದಿ:ದೀಪಾವಳಿ ಎಫೆಕ್ಟ್: ಬೆಂಗಳೂರಿನಲ್ಲಿ ವಾಯುಗುಣಮಟ್ಟ ಸೂಚ್ಯಂಕದಲ್ಲಿ ಹೆಚ್ಚಳ