ಹುಬ್ಬಳ್ಳಿ: ಮುಖ್ಯಮಂತ್ರಿ ಸ್ಥಾನದ ರೇಸ್ನಲ್ಲಿದ್ದು ಸಚಿವ ಸ್ಥಾನವೂ ಸಿಗದೇ ಅಸಮಾಧಾನಗೊಂಡಿರುವ ಅರವಿಂದ ಬೆಲ್ಲದ್ ಪಕ್ಷದ ನಾಯಕರಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ನಗರ ಅಧ್ಯಕ್ಷರಾಗಿರುವ ಅರವಿಂದ ಬೆಲ್ಲದ್ ಅವರ ನೇತೃತ್ವದಲ್ಲಿ ನಡೆಯಬೇಕು. ಆದರೆ ಇಲ್ಲಿ ತದ್ವಿರುದ್ದವಾಗಿದೆ. ಚುನಾವಣೆ ಘೋಷಣೆಯಾದಾಗಿನಿಂದ ಒಮ್ಮೆಯೂ ಚುನಾವಣೆ ಕುರಿತಂತೆ ಸಭೆ ನಡೆಸಿಲ್ಲಯೇ ಇಲ್ಲ.
ಸಿಎಂ ಬೊಮ್ಮಾಯಿ, ಹುಬ್ಬಳ್ಳಿ ವಾಸ್ತವ್ಯದ ಸಮಯದಲ್ಲಿ ಅವರ ನಿವಾಸಕ್ಕೆ ಭೇಟಿಯಾಗಿ ಮಾತುಕತೆ ನಡೆಸಿದ್ದು ಬಿಟ್ಟರೆ ಇಲ್ಲಿಯವರೆಗೂ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ. ತಮ್ಮ ಪಕ್ಷದ ಅಭ್ಯರ್ಥಿಗಳ ಪ್ರಚಾರದಲ್ಲಿಯೂ ಭಾಗಿಯಾಗದಿರುವುದು ಕುತೂಹಲ ಮೂಡಿಸಿದೆ.
ಬೆಲ್ಲದ-ಶೆಟ್ಟರ್ ನಡುವಿನ ಶೀತಲ
ಅರವಿಂದ ಬೆಲ್ಲದ್ ಅವರ ಅಸಮಾಧಾನಕ್ಕೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ನಡುವಿನ ಶೀತಲ ಸಮರ ಕಾರಣ ಎನ್ನಲಾಗಿದೆ. ತಮಗೆ ಸಿಗಬೇಕಾಗಿದ್ದ ಸಚಿವ ಸ್ಥಾನವನ್ನು ಶೆಟ್ಟರ್ ತಮ್ಮ ಆಪ್ತ ಶಂಕರ್ ಪಾಟೀಲ್ ಮುನ್ನೇನಕೊಪ್ಪ ಅವರಿಗೆ ಕೊಡಿಸಿದ್ದಾರೆಂಬ ಅಸಮಾಧಾನ ಬೆಲ್ಲದ್ ಅವರಿಗಿದೆ ಎಂಬ ಮಾತು ಹರಿದಾಡುತ್ತಿದೆ. ಹೀಗಾಗಿ ಶೆಟ್ಟರ್ ಅವರು ಪಾಲ್ಗೊಳ್ಳುವ ಕಾರ್ಯಕ್ರಮದಲ್ಲಿ ಬೆಲ್ಲದ್ ಭಾಗಿಯಾಗುತ್ತಿಲ್ಲ ಎನ್ನಲಾಗ್ತಿದೆ.
ಮಹಾನಗರ ಪಾಲಿಕೆ ಚುನಾವಣೆಯ ಪ್ರಚಾರ ಬಿರುಸು ಪಡೆದುಕೊಂಡಿದೆ. ಎಲ್ಲಾ ನಾಯಕರು ಒಂದೇ ವೇದಿಕೆಯಲ್ಲಿದ್ದರೂ ಬೆಲ್ಲದ್ ಮಾತ್ರ ದೂರ ಉಳಿದುಕೊಂಡಿದ್ದಾರೆ. ರಾಜ್ಯ ನಾಯಕರು ಬಂದಾಗ ಮಾತ್ರ ಅರವಿಂದ ಬೆಲ್ಲದ್ ಕಾಣಿಸಿಕೊಳ್ಳುತ್ತಿದ್ದಾರೆ. ಸ್ಥಳೀಯ ನಾಯಕರ ಕಾರ್ಯಕ್ರಮಕ್ಕೆ ಗೈರಾಗುತ್ತಿದ್ದಾರೆ. ನಿನ್ನೆ ದೇಶಪಾಂಡೆ ನಗರದಲ್ಲಿರುವ ಬಿಜೆಪಿಯ ಪ್ರಚಾರ ಕಚೇರಿಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಚಿವ ಶಂಕರ್ ಪಾಟೀಲ ಮುನೇನಕೊಪ್ಪ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಭಾಗಿದ್ದರು. ಆದರೆ ಶಾಸಕ ಅರವಿಂದ ಬೆಲ್ಲದ್ ಮಾತ್ರ ಗೈರಾಗಿದ್ದರು.
ಇದನ್ನೂ ಓದಿ: ಹೈಕಮಾಂಡ್ ಸೂಚನೆ ಕೊಟ್ರೂ ಕೆಪಿಸಿಸಿ ಸಮಿತಿಗೆ ಪದಾಧಿಕಾರಿಗಳ ನೇಮಕ ವಿಳಂಬ!