ಧಾರವಾಡ: ನಾನು ಎಂಟು ಸಲ ಎಂಎಲ್‌ಎ ಆದವನು, ಆರು ಇಲಾಖೆ ನಿರ್ವಹಿಸಿದವನು, ನನಗೆ ಅನುಭವ ಚೆನ್ನಾಗಿದೆ. ಹೀಗಾಗಿ ಮುಖ್ಯಮಂತ್ರಿ ಆಗುವ ಯೋಗ್ಯತೆ ನನಗಿದೆ ಎಂದು ಸಚಿವ ಉಮೇಶ ಕತ್ತಿ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲ, ನಾನು ಕಳಂಕ ರಹಿತ ಶಾಸಕ, ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಪಕ್ಷ ತೀರ್ಮಾನ ಮಾಡಿದರೆ ಸಿಎಂ ಆಗುವ ಆಸೆ ಇದೆ. ಸಿಎಂ ಆದ ಮೇಲೆ ಪ್ರಧಾನಿಯಾಗುವ ಅಸೆಯೂ ಇರುತ್ತದೆ. ಈಗ ಸದ್ಯಕ್ಕೆ ನಾವು ಅಖಂಡ ಕರ್ನಾಟಕದಲ್ಲಿ ಬದುಕಿದ್ದೇವೆ ಕರ್ನಾಟಕದ ಸಿಎಂ ಆಗುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಉತ್ತರ ಕರ್ನಾಟಕಕ್ಕೆ ಏನಾದರೂ ತೊಂದರೆ ಆದಲ್ಲಿ ಪ್ರತ್ಯೇಕ ರಾಜ್ಯದ ಕೂಗು ಎಬ್ಬಿಸುವೆ. ಉತ್ತರ ಕರ್ನಾಟಕಕ್ಕೆ ತೊಂದರೆ ಮುಂದುವರೆದರೆ ನಾನು ಮತ್ತೆ ಧ್ವನಿ ಎತ್ತುವೆ. ಈ ಭಾಗವನ್ನು ಒಡೆಯುವ ಉದ್ದೇಶ ನನಗಿಲ್ಲ, ಅಖಂಡ ಕರ್ನಾಟಕದಲ್ಲಿ ಬದುಕಬೇಕು, ಅದನ್ನು ಆಳಬೇಕು ಎನ್ನುವ ಉದ್ದೇಶ ಇದೆ ಎಂದರು.
ಉತ್ತರ ಕರ್ನಾಟಕಕ್ಕೆ ಸಿಎಂ ಸ್ಥಾನ ಕೊಡುವ ವಿಚಾರಕ್ಕೆ ಮಾತನಾಡಿದ ಕತ್ತಿ, ಈ ಸಲ ಉತ್ತರ ಕರ್ನಾಟಕದವರಿಗೆ ಸಿಎಂ ಸ್ಥಾನ ಸಿಗಬಹುದು. ನನಗೆ ಇನ್ನೂ 15 ವರ್ಷ ಸಮಯ ಇದೆ. ಈಗ ನಂಗೆ 60 ವರ್ಷ, ಹದಿನೈದು ವರ್ಷದಲ್ಲಿ ಸಿಎಂ ಆಗಬಹುದು. ಎಂಟು ಸಲ ಎಂಎಲ್‌ಎ ಆಗಿದ್ದೇನೆ. 11 ಸಲ ಎಂಎಲ್‌ಎ ಆಗುವೆ ಎಂದ್ರು.
ಇನ್ನು ಅರವಿಂದ ಬೆಲ್ಲದ ಯಾಕೆ ಸಿಎಂ ಆಗಬಾರದು ಅವರ ತಂದೆ ಶಾಸಕರಾಗಿದ್ದರು. ಬೆಲ್ಲದ ಎರಡು ಸಲ ಶಾಸಕರಾಗಿದ್ದಾರೆ. ಯತ್ನಾಳ್, ನಾನು, ಮುರಗೇಶ ನಿರಾಣಿ, ಬೆಲ್ಲದ ಸಹ ಸಿಎಂ ಆಗಬಹುದು. ಉತ್ತರ ಕರ್ನಾಟಕದವರು ಯಾರಾದರೂ ಸಿಎಂ ಆಗಬಹುದು ಎಂದು ಹೇಳಿದ್ರು.