ಹುಬ್ಬಳ್ಳಿ : ನಾವು ಪಕ್ಷಕ್ಕೆ ಕರೆದುಕೊಳ್ಳಲು ಪ್ರಾರಂಭಿಸಿದರೆ ಬಿಜೆಪಿ, ಜೆಡಿಎಸ್ನಲ್ಲಿ ಯಾರು ಇರುವುದಿಲ್ಲ. ನಾವು ಆಪರೇಷನ್ ಮಾಡುವ ಅವಶ್ಯಕತೆ ಇಲ್ಲ. ನಮ್ಮ ತತ್ವ, ಸಿದ್ಧಾಂತಗಳನ್ನು ಒಪ್ಪಿಕೊಂಡು ಬರುವವರು ಬರಲಿ ಎಂದು ಸಚಿವ ಶಿವರಾಜ್ ತಂಗಡಗಿ ಪ್ರತಿಕ್ರಿಯಿಸಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆ ಚುನಾವಣೆ ಸಂದರ್ಭ ದೇಶದ ಪ್ರಧಾನಿ ನರೇಂದ್ರ ಮೋದಿ, ಗೃಹಮಂತ್ರಿ ಅಮಿತ್ ಶಾ ಸೇರಿದಂತೆ ಕೇಂದ್ರ ಬಿಜೆಪಿ ನಾಯಕರು ಎಷ್ಟೇ ಪ್ರಚಾರ ನಡೆಸಿದರೂ ಬಿಜೆಪಿಗೆ 66ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೂರು ತಿಂಗಳ ಒಳಗಾಗಿ ಈಗಾಗಲೇ ಘೋಷಿಸಿರುವ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಮೂರು ಯೋಜನೆಗಳನ್ನು ಜಾರಿಗೊಳಿಸಿದೆ. ಮುಂದಿನ ದಿನಗಳಲ್ಲಿ ಗೃಹ ಲಕ್ಷ್ಮೀ ಯೋಜನೆಯನ್ನು ಜಾರಿ ತರಲಾಗುತ್ತಿದೆ. ಯುವಜನರಿಗೆ ಯುವನಿಧಿ ಯೋಜನೆಯನ್ನು ಡಿಸೆಂಬರ್ ತಿಂಗಳಲ್ಲಿ ಜಾರಿ ತರಲಾಗುತ್ತಿದೆ ಎಂದರು.
ಈ ಯೋಜನೆಯನ್ನು ಬಡವರಿಗೆ, ಸಾಮಾನ್ಯ ಜನರಿಗಾಗಿ ತರಲಾಗಿದೆ. ಮುಂದಿನ ದಿನಗಳಲ್ಲಿ ಜನರೆಲ್ಲರೂ ಕಾಂಗ್ರೆಸ್ ಪರ ಇರುತ್ತಾರೆ. ಇದನ್ನು ಅರಿತುಕೊಂಡು ಬಿಜೆಪಿ, ಜೆಡಿಎಸ್ ಶಾಸಕರು ಕಾಂಗ್ರೆಸ್ಗೆ ಬರಲು ಸಿದ್ಧರಾಗಿದ್ದಾರೆ ಎಂದು ಹೇಳಿದರು.
ನಮ್ಮ ರಾಜ್ಯದಲ್ಲಿ ದ್ವೇಷದ ರಾಜಕಾರಣ ಮಾಡಿದವರು ಬಿಜೆಪಿಯವರು. ಒಂಬತ್ತು ವರ್ಷಗಳ ಕಾಲ ಬಿಜೆಪಿ ರಾಜ್ಯದಲ್ಲಿ ಆಡಳಿತ ನಡೆಸಿದೆ. ಅವರು ಬಡವರಿಗೆ, ಮಧ್ಯಮ ವರ್ಗದವರಿಗೆ, ರೈತರಿಗೆ ಒಂದೇ ಒಂದು ಯೋಜನೆಯನ್ನು ತಂದಿಲ್ಲ. ಅವರು ಸಮಾಜದಲ್ಲಿ ವಿಷ ಬೀಜ ಬಿತ್ತಿ ಅದರಿಂದಲೇ ರಾಜ್ಯವನ್ನು ದೇಶವನ್ನು ಆಳುತ್ತಾ ಬಂದಿದ್ದಾರೆ. ಎಲ್ಲ ವರ್ಗದವರನ್ನು ಗೌರವಿಸುವುದು ಮತ್ತು ಪ್ರೀತಿಸುವುದು ಕಾಂಗ್ರೆಸ್ ಪಕ್ಷ ಮಾತ್ರ. ಬಿಜೆಪಿ ಅವರಿಂದ ಇದು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು.
ಯೋಜನೆಗೆ ದುಡ್ಡಿಲ್ಲ ಎಂದು ಯಾರು ಹೇಳಿದ್ದಾರೆ. ಎಲ್ಲ ಯೋಜನೆಗಳಿಗೂ ಹಣವಿದೆ. ಆದ್ರೆ ಬಿಜೆಪಿಯವರಿಗೆ ನಡುಕ ಹುಟ್ಟಿದೆ. ಈ ನಿಟ್ಟಿನಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ಡ್ರಗ್ಸ್ ದಂಧೆ ನಡೆದಿರುವುದು ಬಿಜೆಪಿ ಸರ್ಕಾರ ಇದ್ದಾಗ. ನಾವು ಈಗ ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದಿರುವ ಪ್ರಕರಣಗಳಿಗೆ ಕಡಿವಾಣ ಹಾಕುತ್ತಿದ್ದೇವೆ ಎಂದರು.
ಕುಮಾರಸ್ವಾಮಿ ಅವರ ಫೆನ್ ಡ್ರೈವ್‌ನಲ್ಲಿ ಏನೂ ಹುರುಳಿಲ್ಲ. ಬುಟ್ಟಿಯಲ್ಲಿ ಹಾವಿಟ್ಟು ಹಾವಿದೆ ಹಾವಿದೆ ಎಂದು ಹೆದರಿಸುವ ಮೂಲಕ ಕುಮಾರಸ್ವಾಮಿ ಹತಾಶರಾಗಿದ್ದಾರೆ. ವರ್ಗಾವಣೆ ಎಲ್ಲ ಸರ್ಕಾರದ ಅವಧಿಯಲ್ಲಿಯೂ ಆಗಿದೆ. ಸರಿಯಾದ ದಾಖಲಾತಿ ನೀಡದೇ ಹರಾಜು ಪ್ರಕ್ರಿಯೆ ಎಂದು ಹೇಳುವುದು ಸರಿಯಲ್ಲ ಎಂದು ಹೇಳಿದರು.
ಇದನ್ನೂ ಓದಿ : ನಾಗ್ಪುರ ಶಿಕ್ಷಣ ನೀತಿ ರದ್ದು, ಹೊಸ ಕರ್ನಾಟಕ ಶಿಕ್ಷಣ ನೀತಿ ಜಾರಿ: ಡಿಸಿಎಂ ಡಿ.ಕೆ.ಶಿವಕುಮಾರ್