ಹುಬ್ಬಳ್ಳಿ : ಡಿ.ಕೆ. ಶಿವಕುಮಾರ್ ಮತ್ತೊಂದು ಪವರ್ ಸೆಂಟರ್ ಆಗಿರಬಾರದು ಎಂದು ಕಾಂಗ್ರೆಸ್‌ನಲ್ಲಿ ದೊಡ್ಡ ಪ್ರಮಾಣದ ಷಡ್ಯಂತ್ರ ನಡೆಯುತ್ತಿದೆ. ಅವರವರ ಜಗಳದಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ನಗರದ ತಮ್ಮ ಕಚೇರಿಯಲ್ಲಿ ಲಕ್ಷ್ಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಇದೊಂದು ನೆಗೆಟಿವ್ ಸರ್ಕಾರವಾಗಿ ಪರಿವರ್ತನೆಯಾಗಿದೆ. ಹಳ್ಳಿಗಳಿಗೆ, ರೈತರಿಗೆ ಸಮರ್ಪಕ ವಿದ್ಯುತ್ ಸಿಗುತ್ತಿಲ್ಲ. ವಿಪರೀತವಾದ ಒಳಜಗಳದಿಂದ ಆಡಳಿತ ಯಂತ್ರ ಸಂಪೂರ್ಣ ಹದಗೆಟ್ಟಿದೆ. ಎರಡು ಮೂರು ದಿನಗಳಲ್ಲಿ ವಿಪಕ್ಷ ನಾಯಕರ ನೇಮಕ ಆಗುತ್ತದೆ. ರಾಷ್ಟ್ರ ನಾಯಕರ ಜೊತೆ ಚರ್ಚಿಸಿ ಸದ್ಯದಲ್ಲಿಯೇ ಎರಡೂ ಸದನಗಳ ವಿಪಕ್ಷ ನಾಯಕರನ್ನು ಆಯ್ಕೆ ಮಾಡುತ್ತೇವೆ. ಸರ್ಕಾರದ ನಿಷ್ಕ್ರಿಯತೆ, ವೈಫಲ್ಯದ ವಿರುದ್ಧ ಹೋರಾಡುತ್ತೇವೆ ಎಂದರು.
ಮುಂದುವರೆದು, ಭ್ರಷ್ಟಾಚಾರ ನಡೆಯುತ್ತಿದೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಒಂದು ವರ್ಗವನ್ನು ಕಡೆಗಣಿಸಲಾಗುತ್ತಿದೆ ಎಂದು ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ. ವರ್ಗಾವಣೆಯಲ್ಲಿ ಭ್ರಷ್ಟಾಚಾರ ಇದೆ ಎಂದು ಅವರದ್ದೇ ಪಕ್ಷದ ಶಾಸಕರು ಹೇಳಿದ್ದಾರೆ. 6 ತಿಂಗಳಲ್ಲಿ ಈ ಪ್ರಮಾಣದ ಆಡಳಿತ ವಿರೋಧಿ ಅಲೆ ನಿರ್ಮಾಣವಾಗುತ್ತದೆ ಎಂದು ನಾವು ಕೂಡಾ ಅಂದುಕೊಂಡಿರಲಿಲ್ಲ. ಜನ ಐದು ವರ್ಷ ಆಡಳಿತ ನಡೆಸಲು ಅವಕಾಶ ಕೊಟ್ಟಿದ್ದಾರೆ. ಸರಿಯಾಗಿ ಸರ್ಕಾರ ನಡೆಸಿ ಎಂದು ನಾನು ಕಾಂಗ್ರೆಸ್‌ನವರಿಗೆ ಆಗ್ರಹಿಸುತ್ತೇನೆ ಎಂದರು.
'ಅಕ್ರಮ ಚಟುವಟಿಕೆ ನಡೆಸುವವರಿಗೆ ಕುಮ್ಮಕ್ಕು ಕೊಟ್ಟಿಲ್ಲ' : ಧಾರವಾಡ ಜಿಲ್ಲೆಯ ನರೇಂದ್ರ ಗ್ರಾಮದಲ್ಲಿ ಜೂಜಾಟದ ಅಡ್ಡೆ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಪ್ರಹ್ಲಾದ್ ಜೋಶಿ , 'ಯಾರೇ ಆಗಿದ್ದರೂ ಅಕ್ರಮ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರೆ, ಕಾನೂನು ಬಾಹಿರ ಕೃತ್ಯಗಳಲ್ಲಿ ಭಾಗಿಯಾಗಿದ್ದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವಂತೆ ಅಂದು ಕೂಡ ಸ್ಪಷ್ಟ ಪಡಿಸಿದ್ದೇನೆ. ಇಂದು ಕೂಡಾ ಅದೇ ಹೇಳುತ್ತಿದ್ದೇನೆ. ಯಾರೇ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರೂ ಸೂಕ್ತ ಕ್ರಮ ಜರುಗಿಸಿ. ಯಾವುದೇ ರೀತಿಯಲ್ಲಿ ಯಾವುದೇ ಅಕ್ರಮ ಚಟುವಟಿಕೆಗಳಿಗೆ ಕುಮ್ಮಕ್ಕು ಕೊಡುವ ಪ್ರಶ್ನೆಯೇ ಇಲ್ಲ. ನರೇಂದ್ರ ಗ್ರಾಮದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆದಿರುವುದು ನಿಜಕ್ಕೂ ಖಂಡನೀಯವಾಗಿದೆ. ಈ ಬಗ್ಗೆ ಪೊಲೀಸರು ತಪ್ಪಿತಸ್ಥರನ್ನು ವಶಕ್ಕೆ ಪಡೆದು ಕಾನೂನು ಕ್ರಮ ಜರುಗಿಸಿ' ಎಂದು ಅವರು ಹೇಳಿದರು.
ಇದನ್ನೂ ಓದಿ : ಪ್ರಜಾಪ್ರಭುತ್ವ, ಸಮಾಜವಾದ, ಜಾತ್ಯತೀತತೆ ನೆಹರು ಬದುಕಿನ ಮೌಲ್ಯಗಳು: ಸಿದ್ದರಾಮಯ್ಯ ಸ್ಮರಣೆ