ಹುಬ್ಬಳ್ಳಿ ಡಿ.ಕೆ ಶಿವಕುಮಾರ್ ವಿರುದ್ಧ ಕೇಸ್ ಹಾಕಿ, ಸಿಬಿಐ ದಾಳಿ ಮಾಡಿಸಿ, ಅವರನ್ನು ಬಂಧನ ಮಾಡಿಸಿಯೇ ಚುನಾವಣೆ ಗೆಲ್ಲಬೇಕಿಲ್ಲ. ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಖಂಡಿತಾ ಅಂತಾ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಡಿ ಕೆ ಶಿವಕುಮಾರ್ ಮನೆ ಮೇಲೆ ಸಿಬಿಐ ಕಾನೂನಿನ ಅಡಿಯಲ್ಲಿ ದಾಳಿ ಮಾಡಿದೆ. ಇದು ರಾಜಕೀಯ ಪ್ರೇರಿತ ದಾಳಿ ಅಲ್ಲ. ಕಾಂಗ್ರೆಸ್ ರಾಜಕೀಯ ಪ್ರೇರಿತ ದಾಳಿ ಎಂದು ಆರೋಪಿಸುವುದು ಸರಿಯಲ್ಲ ಎಂದರು.
ಕಳೆದ ಬಾರಿ 12 ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ವೇಳೆ ಬಿಜೆಪಿ ಯಾರ ಮೇಲೂ ದಾಳಿ ಮಾಡಿಸಿಲ್ಲ. ಡಿ ಕೆ ಶಿವಕುಮಾರ್ ಅಕ್ರಮ ಮಾಡಿ ಜೈಲಿಗೆ ಹೋಗಿ ಬಂದಿದ್ದಾರೆ. ಡಿಕೆಶಿ ವಿರುದ್ಧ ಇನ್ನೂ ತನಿಖೆ ನಡೆಯುತ್ತಿದೆ. ಅವರು ಜಾಮೀನಿನ ಮೇಲೆ ಹೊರಗಿದ್ದಾರೆ. ಅದನ್ನು ಮರೆಯಬಾರದು ಎಂದು ಶೆಟ್ಟರ್ ಗುಡುಗಿದರು.
ಸಿಬಿಐ ಸ್ವತಂತ್ರ ಸಂಸ್ಥೆಯಾಗಿದೆ. ಈ ಹಿಂದೆ ಬಿಜೆಪಿಯವರು ಜೈಲಿಗೆ ಹೋಗಿ ಬಂದವರು ಎಂದು ಕಾಂಗ್ರೆಸ್ನವರು ಆರೋಪ ಮಾಡುತ್ತಿದ್ದರು. ಇದೀಗ ಜೈಲಿಗೆ ಹೋಗಿ ಬಂದ ಡಿಕೆಶಿಯನ್ನೇ ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿದ್ದಾರೆ ಎಂದರು. ಉತ್ತರಪ್ರದೇಶದ ಸಿಎಂ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಿದ್ದರಾಮಯ್ಯನವರು ಕೆಳಹಂತದ ಭಾಷೆಯಲ್ಲಿ ಆರೋಪ ಮಾಡುವುದು ಸರಿಯಲ್ಲ. ಕೆಳಹಂತದ ಭಾಷೆ ಬಳಸಿ ಆರೋಪ ಮಾಡುವುದು ನಮ್ಮ ಸಂಸ್ಕೃತಿ ಅಲ್ಲ ಎಂದು ಶೆಟ್ಟರ್ ಕಿಡಿಕಾರಿದರು.