ಹುಬ್ಬಳ್ಳಿ : ಉತ್ತರ ಕರ್ನಾಟಕದ ಆರಾಧ್ಯದೈವ ಸದ್ಗುರು ಸಿದ್ಧಾರೂಢರ ಜಾತ್ರೆ ಅಂದ್ರೆ ಸಾಕು, ಎಲ್ಲರಿಗೂ ಅಚ್ಚುಮೆಚ್ಚು. ವಾಣಿಜ್ಯ ನಗರಿ ಹುಬ್ಬಳ್ಳಿ ಜನರು ಮಾತ್ರವಲ್ಲದೆ ನಾಡಿನ ವಿವಿಧ ಮೂಲೆಗಳಿಂದ ಜನರು ಆಗಮಿಸುತ್ತಾರೆ. ವಾರಗಟ್ಟಲೆ ನಡೆಯುವ ಈ ಜಾತ್ರೆಯಲ್ಲಿ ಹಾಲು ಕರೆಯುವ ಸ್ಪರ್ಧೆ ಏರ್ಪಡಿಸಿದ್ದು, ಕೃಷಿ ಹಾಗೂ ಹಾಲು ಉತ್ಪಾದನೆ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಕಾರ್ಯ ಮಾಡಲಾಗಿತ್ತು.
ಹೌದು.. ಜಾನುವಾರುಗಳ ಹೆಚ್ಚು ಹಾಲು ಉತ್ಪಾದನೆ ಮತ್ತು ಸಾಕಣಿಕೆ ಕುರಿತಂತೆ ತಿಳುವಳಿಕೆ ಮೂಡಿಸುವ ಉದ್ದೇಶದಿಂದ ಈ ಒಂದು ಕಾರ್ಯಕ್ರಮ ಆಯೋಜಿಸಲಾಗಿದ್ದು, ಹೈನುಗಾರಿಕೆ ಹಾಗೂ ಕೃಷಿಯೇತರ ಚಟುವಟಿಕೆಗಳ ಉತ್ತೇಜನಕ್ಕೆ ಈ ಸ್ಪರ್ಧೆ ಸಾಕ್ಷಿಯಾಗಿದೆ.
ಇನ್ನೂ ಪಶುಪಾಲನೆ ಹಾಗೂ ಪಶು ವೈದ್ಯಕೀಯ ಸೇವಾ ಇಲಾಖೆ ಮತ್ತು ಕೆಎಂಎಫ್ ವತಿಯಿಂದ ಸ್ಪರ್ಧೆಯೊಂದನ್ನು ಆಯೋಜಿಸಲಾಗಿದ್ದು, ಸ್ಪರ್ಧೆಗೆ ಜಿಲ್ಲೆಯ ವಿವಿಧ ಕಡೆಗಳಿಂದ ಹೈನುಗಾರಿಕೆಯಲ್ಲಿ ತೊಡಗಿದ ಕೃಷಿಕರು ಆಗಮಿಸಿದ್ದರು. ಇಲ್ಲಿ ತಮ್ಮ ಜಾನುವಾರುಗಳ ಹಾಲು ಕರೆಯುವ ಮೂಲಕ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದರು. ಸ್ಪರ್ಧೆಯಲ್ಲಿ ಪಾಲ್ಗೊಂಡ ಯುವಕರು ಹಾಗೂ ಮಹಿಳೆಯರು ಸಿದ್ಧಾರೂಢರ ಜಾತ್ರೆ ಮೆರಗನ್ನು ಹೆಚ್ಚಿಸಿದರು.
ಒಟ್ಟಿನಲ್ಲಿ ನಗರೀಕರಣದ ಭರಾಟೆಯ ನಡುವೆಯೂ ಕೂಡಾ, ಹಾಲು ಕರೆಯುವ ಸ್ಪರ್ಧೆಯಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿದೆ. ಅಲ್ಲದೆ ಜಾನುವಾರು ಸಾಕಣಿಕೆ ಮತ್ತು ಹಾಲು ಕುರಿತಂತೆ ಅಧಿಕಾರಿಗಳು ಸಾರ್ವಜನಿಕರಿಗೆ ಮಾಹಿತಿ ನೀಡಿದರು.