ಹುಬ್ಬಳ್ಳಿ: ಹೋಮ್ ಕ್ವಾರಂಟೈನ್ನಲ್ಲಿ ಇರಬೇಕಿದ್ದ ನಗರದ ಕಿಮ್ಸ್ ಆಸ್ಪತ್ರೆಯ ಎಂಬಿಬಿಎಸ್ ವಿದ್ಯಾರ್ಥಿಯೊಬ್ಬ ಸಾರ್ವಜನಿಕ ಸ್ಥಳದಲ್ಲಿ ಓಡಾಟ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕ್ವಾರಂಟೈನ್ ಸೀಲ್ ಇದ್ದರೂ ನಗರದಾದ್ಯಂತ ಸಂಚಾರಿಸಿದ ಎಂಬಿಬಿಎಸ್ ವಿದ್ಯಾರ್ಥಿ ಚಿತ್ರದುರ್ಗ ಜಿಲ್ಲೆಯಿಂದ ಬಂದ ವಿದ್ಯಾರ್ಥಿ ಕೈಗೆ ಕಿಮ್ಸ್ ಆಡಳಿತ ಮಂಡಳಿ ಕ್ವಾರಂಟೈನ್ ಸೀಲ್ ಹಾಕಿ ಹೋಮ್ ಕ್ವಾರಂಟೈನ್ನಲ್ಲಿ ಇರುವಂತೆ ಸೂಚನೆ ನೀಡಿತ್ತು. ಆದ್ರೆ ಈ ವಿದ್ಯಾರ್ಥಿ ರಾತ್ರಿ ವೇಳೆ, ಬೇಕಾಬಿಟ್ಟಿ ಓಡಾಟ ನಡೆಸಿದ್ದಾನೆ ಎನ್ನಲಾಗಿದೆ. ಕಳೆದ ಎರಡು ದಿನಗಳ ಹಿಂದೆ ರಾತ್ರಿ ವೇಳೆ ಪೊಲೀಸರ ಕೈಗೆ ಸಿಕ್ಕರೂ ಸರಿಯಾದ ಮಾಹಿತಿ ನೀಡದೇ ತಪ್ಪಿಸಿಕೊಳ್ಳಲು ವಿದ್ಯಾರ್ಥಿ ಯತ್ನಿಸಿದ್ದು, ಊರಿಂದ ಬಂದ ಸ್ನೇಹಿತನನ್ನು ಕರೆದೊಯ್ಯುವ ನೆಪ ಹೇಳಿ ರಾತ್ರಿ ವೇಳೆ ಬಂದಿರುವುದಾಗಿ ಪೊಲೀಸರಿಗೆ ಹೇಳಿದ್ದಾನೆ ಎಂದು ತಿಳಿದು ಬಂದಿದೆ.
ಇನ್ನು ವೈದ್ಯ ವಿದ್ಯಾರ್ಥಿಯಿಂದ ಸರ್ಕಾರದ ನಿಯಮ ಉಲ್ಲಂಘನೆಯಾಗಿದ್ದು, ಸಾಮಾನ್ಯ ಜನರಿಗೊಂದು ನ್ಯಾಯ, ವೈದ್ಯ ವಿದ್ಯಾರ್ಥಿಗಳಿಗೊಂದು ನ್ಯಾಯವೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಹುಟ್ಟಿಕೊಂಡಿದೆ.