ಹುಬ್ಬಳ್ಳಿ: ಕೇಂದ್ರ ಸರ್ಕಾರ ಜೂನ್ 8 ರಂದು ದೇವಸ್ಥಾನಗಳನ್ನು ಪುನಃ ತೆರೆಯಲು ಅನುಮತಿ ನೀಡಿದ ಹಿನ್ನೆಲೆ ಭಕ್ತರ ಆಗಮನಕ್ಕೆ ಶ್ರೀ ಸಿದ್ದಾರೂಢರ ಗದ್ದುಗೆ ತಯಾರಾಗುತ್ತಿದೆ.
ಭೂ ಲೋಕದ ಕೈಲಾಸ ಎಂದು ಕರೆಸಿಕೊಳ್ಳುವ ಪ್ರಸಿದ್ಧ ಸಿದ್ದಾರೂಢರ ಮಠದಲ್ಲಿ ದಿನದ 24 ಗಂಟೆಗಳ ಕಾಲ ಓಂ ನಮಃ ಶಿವಾಯ ಎಂಬ ಬೀಜಾಕ್ಷರಿ ಮಂತ್ರದ ಪಠನೆ ನಡೆಯುತ್ತಲೇ ಇರುತ್ತದೆ. ಅದೇ ರೀತಿಯಾಗಿ ಇಷ್ಟು ದಿನ ದರ್ಶನ ಪಡೆಯದೇ ಇದೀಗ ಆಗಮಿಸಲಿರುವ ಭಕ್ತರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಬಾಕ್ಸ್ಗಳನ್ನ ರಚಿಸಲಾಗಿದೆ. ಅಲ್ಲದೇ ಪ್ರತಿಯೊಬ್ಬ ಭಕ್ತನಿಗೂ ಸ್ಯಾನಿಟೈಸರ್, ಮಾಸ್ಕ್ ಇದ್ದರೆ ಮಾತ್ರ ದರ್ಶನ ಪಡೆಯಲು ಅನುಮತಿ ನೀಡಲು ಸಿದ್ದತೆ ನಡೆದಿದೆ.
ಈಗಾಗಲೇ ಎಲ್ಲ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಗಿದ್ದು, ಸ್ವಚ್ಛತೆಯ ಬಗ್ಗೆ ಗಮನಹರಿಸಲಾಗಿದೆ. ಅಲ್ಲದೇ ಮಠಕ್ಕೆ ಪ್ರತಿ ಸೋಮವಾರದಂದು ಸಾವಿರಾರು ಭಕ್ತರು ಬರಲಿದ್ದು, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹಾಗೆಯೇ ಭಕ್ತಾದಿಗಳು ತರುವ ತೆಂಗಿನಕಾಯಿ, ಹೂವು, ಕರ್ಪೂರ, ದೀಪದ ಎಣ್ಣೆಗೆ ನಿರ್ಬಂಧ ವಿಧಿಸಿದ್ದು, ದೂರದಿಂದಲೇ ದರ್ಶನ ಮಾಡಬೇಕು ಎಂದು ಭಕ್ತರಲ್ಲಿ ಮನವಿ ಮಾಡಲಾಗಿದೆ.