ಹುಬ್ಬಳ್ಳಿ: ಮದುವೆಯಾಗುವುದಾಗಿ ನಂಬಿಸಿ, ವಧುವಿನ ಮನೆಯವರಿಂದ 19 ಲಕ್ಷ ರೂಪಾಯಿ ಪಡೆದು ವಂಚಿಸಿದ್ದ ವ್ಯಕ್ತಿಯನ್ನ ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ.
ಮೈಸೂರು ಮೂಲದ ಪುಟ್ಟಯ್ಯ ಅಲಿಯಾಸ್ ರಮೇಶ್ ಸಿದ್ದಮಾಧು ಬಂಧಿತ ಆರೋಪಿ. ಹುಬ್ಬಳ್ಳಿ ನಿವಾಸಿಯೊಬ್ಬರು ತಮ್ಮ ಮಗಳಿಗೆ ವರ ಹುಡುಕಲು 2016ರಲ್ಲಿ ಗೃಹಶೋಭಾ ಮಾಸ ಪತ್ರಿಕೆಯಲ್ಲಿ ಜಾಹೀರಾತು ನೀಡಿದ್ರು. ಜಾಹೀರಾತಿನಲ್ಲಿ ಮಗಳ ಮಾಹಿತಿ ಹಾಗೂ ಮೊಬೈಲ್ ನಂಬರ್ ಸಹ ನೀಡಿದ್ರು. ಇದನ್ನ ಅಸ್ತ್ರವಾಗಿ ಮಾಡಿಕೊಂಡ ಆರೋಪಿ, ವಧುವಿನ ಮನೆಯವರಿಂದ ಬರೋಬ್ಬರಿ 19 ಲಕ್ಷ ರೂಪಾಯಿ ಪಡೆದು ವಂಚಿಸಿದ್ದಾನೆ.
ಜಾಹೀರಾತು ನೋಡಿ ವಧುವಿನ ತಂದೆಯನ್ನ ಸಂಪರ್ಕಿಸಿದ್ದ ರಮೇಶ್ ಸಿದ್ದಮಾಧು, ತಾನೂ ಕೆಪಿಟಿಸಿಎಲ್ ಗುಂಡ್ಲುಪೇಟೆಯಲ್ಲಿ ಎಇಇ ಎಂದು ಪರಿಚಯ ಮಾಡಿಕೊಂಡಿದ್ದ. ತನಗೆ ಶ್ರೀಘ್ರದಲ್ಲೆ ಪ್ರಮೋಷನ್ ಆಗಲಿದೆ. ಗುಂಡ್ಲುಪೇಟೆಯಿಂದ ಹುಣಸೂರಿಗೆ ವರ್ಗಾವಣೆ ಮಾಡಿಸಿಕೊಳ್ಳಲು ಮೇಲಧಿಕಾರಿಗಳಿಗೆ ಹಣ ನೀಡಬೇಕು ಎಂದು ಹುಡುಗಿಯ ಮನೆಯವರನ್ನ ನಂಬಿಸಿದ್ದ. ಅಲ್ಲದೇ 2016 ರಿಂದ 2018ರವರೆಗೆ ಬ್ಯಾಂಕ್ ಅಕೌಂಟ್ ಮೂಲಕ 19 ಲಕ್ಷ ರೂಪಾಯಿ ಹಣವನ್ನ ಪಡೆದಿದ್ದ.
ಬಳಿಕ ಹಣವನ್ನ ಮರಳಿ ನೀಡದೇ, ಮಗಳನ್ನ ಮದುವೆಯಾಗದೇ ವಂಚಿಸಿದ ಆರೋಪಿ ವಿರುದ್ಧ ಹುಡುಗಿಯ ಮನೆಯವರು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಇದೀಗ ಆರೋಪಿಯನ್ನ ಬಂಧಿಸಿ, ಆರೋಪಿಯಿಂದ 19 ಲಕ್ಷ ರೂ. ಜಪ್ತಿ ಮಾಡಿದ್ದಾರೆ.