ಹುಬ್ಬಳ್ಳಿ : ಪತ್ನಿ ಮೇಲೆ ಅನುಮಾನ ಪಡುತ್ತಿದ್ದ ವ್ಯಕ್ತಿಯೊಬ್ಬ ಆಕೆಯನ್ನು ಕೊಲೆ ಮಾಡಿ ನೇತು ಹಾಕಿರುವ ಘಟನೆ ನಗರದಲ್ಲಿ ನಡೆದಿದೆ.
ಲಿಂಗರಾಜನಗರ ಬಳಿಯ ಹನುಮಂತನಗರ ಬಡಾವಣೆಯ ನಿವಾಸಿ, ಕಾರು ಚಾಲಕ ಮಹದೇವಪ್ಪ ಪತ್ನಿಯನ್ನು ಹತ್ಯೆ ಮಾಡಿರುವ ಆರೋಪಿ. ಈತ ಮೊದಲ ಗಂಡನನ್ನು ಬಿಟ್ಟು ಬಂದಿದ್ದ ಕೊಲ್ಕತ್ತಾ ಮೂಲದ ರೇಣುಕಾ ಎಂಬಾಕೆಯನ್ನು ಕಳೆದ ವರ್ಷ ಮದುವೆಯಾಗಿದ್ದ. ಇತ್ತೀಚೆಗೆ ಪತ್ನಿ ಮೇಲೆ ಸಂದೇಹಪಡಲು ಶುರು ಮಾಡಿದ್ದ ಮಹದೇವಪ್ಪ, ಪತ್ನಿಯ ಕುತ್ತಿಗೆಗೆ ಸೀರೆಯಿಂದ ಬಿಗಿದು ಕೊಲೆ ಮಾಡಿದ್ದಾನೆ ಎಂದು ಹೇಳಲಾಗ್ತಿದೆ.
ಮೃತ ರೇಣುಕಾ ಜಗದೀಶ್ ಎಂಬಾತನನ್ನು ಮೊದಲು ಮದುವೆಯಾಗಿದ್ದಳು, ದಂಪತಿಗೆ ಇಬ್ಬರು ಮಕ್ಕಳೂ ಇದ್ದರು. ಈ ನಡುವೆ ಇವರ ಸಂಸಾರಕ್ಕೆ ಮಹದೇವಪ್ಪ ಎಂಟ್ರಿಯಾಗಿದ್ದ. ಪತಿ ಕೊಲ್ಕತ್ತಾಗೆ ದುಡಿಯಲು ಹೋದರೆ, ಇತ್ತ ರೇಣುಕಾ ಮಹದೇವಪ್ಪನ ಜೊತೆ ಸಂಸಾರ ಆರಂಭಿಸಿದ್ದಳು. ಈ ವಿಷಯ ತಿಳಿದು ಮೊದಲ ಗಂಡ ಆಕೆಯನ್ನು ಸಂಪೂರ್ಣವಾಗಿ ತ್ಯಜಿಸಿದ್ದ. ಮಹದೇವಪ್ಪನೊಂದಿಗೆ ಸಂಸಾರ ನಡೆಸುತ್ತಿದ್ದ ರೇಣುಕಾ, ಮನೆಗೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಳು. ಪ್ರತಿ ದಿನ ಕೆಲಸ ಮುಗಿಸಿ ರೇಣುಕಾ ಮನೆಗೆ ಬಂದರೆ ಸಾಕು, ಮಹದೇವಪ್ಪ ಆಕೆಯ ಮೇಲೆ ಅನುಮಾನಪಟ್ಟು ಕಿರುಕುಳ ಕೊಡುತ್ತಿದ್ದ. ಭಾನುವಾರ ರಾತ್ರಿ ಇವರಿಬ್ಬರ ನಡುವೆ ಜಗಳ ನಡೆದು, ರೇಣುಕಾ ಮಲಗಿದ್ದ ವೇಳೆ ಸೀರೆಯಿಂದ ಆಕೆಯ ಕುತ್ತಿಗೆಗೆ ಬಿಗಿದು ಮಹದೇವಪ್ಪ ಕೊಲೆ ಮಾಡಿದ್ದಾನೆ ಎಂದು ಹೇಳಲಾಗ್ತಿದೆ.
ಇದನ್ನೂ ಓದಿ: ಕ್ರಿಮಿನಾಶಕ ಸೇವಿಸಿ ಪೊಲೀಸ್ ಕಾನ್ಸ್ಟೇಬಲ್ ಆತ್ಮಹತ್ಯೆ
ಘಟನೆಯ ನಂತರ ಪತ್ನಿ ರೇಣುಕಾ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಬಿಂಬಿಸಲು ಮಹದೇವಪ್ಪ ಪ್ರಯತ್ನಿಸಿದ್ದ. ಆದರೆ, ಪೊಲೀಸರ ವಿಚಾರಣೆ ವೇಳೆ ನಿಜ ವಿಷಯ ಗೊತ್ತಾಗಿದೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು, ತನಿಖೆ ಮುಂದುವರೆಸಿದ್ದಾರೆ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ, ಇತ್ತ ತಾಯಿಯೂ ಇಲ್ಲದೆ, ಅತ್ತ ಅಪ್ಪನೂ ಇಲ್ಲದೆ ಮಕ್ಕಳು ಮಾತ್ರ ಅನಾಥರಾಗಿದ್ದಾರೆ.