ಹುಬ್ಬಳ್ಳಿ: ಈ ಬಾರಿ ಧಾರವಾಡ ಲೋಕಸಭಾ ಚುನಾವಣೆಯಲ್ಲಿ ಪ್ರಹ್ಲಾದ್ ಜೋಶಿ 2 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ. ಮುಂಬೈ ಕರ್ನಾಟಕ ಹಾಗೂ ಹೈದ್ರಾಬಾದ್ ಕರ್ನಾಟಕ ಭಾಗದ ಎಲ್ಲ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದ್ದು, ಸೋಲಿಲ್ಲದ ಸರದಾರ ಎಂದು ಹೇಳಿಕೊಂಡು ತಿರುಗುವ ಮಲ್ಲಿಕಾರ್ಜುನ ಖರ್ಗೆಗೆ ಸೋಲು ಖಚಿತವೆಂದು ವಿಧಾನ ಪರಿಷತ್ ಸದಸ್ಯ ರಘುನಾಥ್ ಮಲ್ಕಾಪುರೆ ಭವಿಷ್ಯ ನುಡಿದರು.
ನಗರದ ಬಿಜೆಪಿ ಕಾರ್ಯದಲ್ಲಿ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ನಲ್ಲಿ ಒಳಬೇಗುದಿ ಹೆಚ್ಚಿದ್ದು, ಅವರನ್ನು ಸೋಲಿಸಲು ಜನ ಸನ್ನದ್ಧರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಒಂಟಿಯಾಗಿದ್ದಾರೆ. ಈ ನಿಟ್ಟಿನಲ್ಲಿ ಸೋಲಿಲ್ಲದ ಸರದಾರ ಈ ಬಾರಿ ಸೋಲು ಕಟ್ಟಿಟ್ಟ ಬುತ್ತಿ ಎಂದರು.
ಕಿತ್ತೂರು ಕರ್ನಾಟಕದ ಒಂದು ಸ್ಥಾನವನ್ನು ಕಳೆದುಕೊಂಡಿದ್ದೆವು. ಆದರೆ ಈ ಬಾರಿ ಆ ಕ್ಷೇತ್ರ ಗೆಲ್ಲುವ ಮೂಲಕ ಮುಂಬೈ ಕರ್ನಾಟಕದಲ್ಲಿ ವಿಜಯ ಸಾಧಿಸಲಿದ್ದೇವೆ. ಹೈದರಾಬಾದ್ ಕರ್ನಾಟಕದ ಎಲ್ಲ ಕ್ಷೇತ್ರಗಳನ್ನು ಗೆಲ್ಲುತ್ತೇವೆ. ಮತ್ತೊಮ್ಮೆ ಪ್ರಹ್ಲಾದ್ ಜೋಶಿಯವರಿಗೆ ಮತ ನೀಡಬೇಕು ಎಂದು ಮಲ್ಕಾಪುರೆ ಕರೆ ನೀಡಿದರು.
ಇನ್ನು ಬಿಜೆಪಿಯಲ್ಲಿ ಹಿಂದುಳಿದವರಿಗೆ ಟಿಕೆಟ್ ನೀಡುತ್ತಿಲ್ಲ ಎನ್ನುವ ಮಾಜಿ ಸಿಎಂ ಸಿದ್ಧರಾಮಯ್ಯಗೆ ದಕ್ಷಿಣ ಕನ್ನಡ ಎಂಪಿ ನಳಿನ್ ಕುಮಾರ್ ಕಟೀಲು ಯಾಕೆ ಕಾಣುತ್ತಿಲ್ಲ ಎಂದು ಪ್ರಶ್ನಿಸಿದರು. ಅಲ್ಲದೆ, ಟಿಕೆಟ್ ನೀಡುವುದು ಮುಖ್ಯವಲ್ಲ, ಗೆಲ್ಲಿಸಿ ಕಳಿಸುವುದು ಮುಖ್ಯ ಎಂದು ತಿರುಗೇಟು ನೀಡಿದರು.