ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರವೂ ಸೇರಿ 10 ಕ್ಷೇತ್ರಗಳ ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಬಿಜೆಪಿ ಇಂದು ಬಿಡುಗಡೆ ಮಾಡಿತು. ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸೇರಿರುವ ಮಾಜಿ ಸಿಎಂ ಜಗದೀಶ ಶೆಟ್ಟರ್ ವಿರುದ್ಧ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಅವರನ್ನು ಪಕ್ಷ ಕಣಕ್ಕಿಳಿಸಿದೆ. ಇಂದು ಕಾಂಗ್ರೆಸ್ ಸೇರಿರುವ ಶೆಟ್ಟರ್ ಅವರಿಗೆ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನಸಭೆ ಕ್ಷೇತ್ರದ ಟಿಕೆಟ್ ನೀಡಲಾಗಿದೆ. ಇದೀಗ ಇದೇ ಕ್ಷೇತ್ರದಿಂದ ಮಹೇಶ್ ಟೆಂಗಿನಕಾಯಿ ಅವರಿಗೆ ಬಿಜೆಪಿ ಟಿಕೆಟ್ ಘೋಷಿಸಿದೆ. ಇದರಿಂದಾಗಿ ಮಹೇಶ್ ಟೆಂಗಿನಕಾಯಿ ಮತ್ತು ಶೆಟ್ಟರ್ ಮಧ್ಯೆ ನೇರಾನೇರ ಸ್ಪರ್ಧೆ ಏರ್ಪಡಲಿದೆ.
ಗುರು-ಶಿಷ್ಯರ ಮಧ್ಯೆ ಸ್ಪರ್ಧೆ: ಜಗದೀಶ ಶೆಟ್ಟರ್ ಮತ್ತು ಮಹೇಶ ಟೆಂಗಿನಕಾಯಿ ಅವರು ಗುರು ಶಿಷ್ಯರಂತಿದ್ದರು. ಪ್ರತಿ ಸಲ ಚುನಾವಣೆಯಲ್ಲಿ ಶೆಟ್ಟರ್ ಅವರ ಪರವಾಗಿ ಮಹೇಶ್ ಟೆಂಗಿನಕಾಯಿ ಕೆಲಸ ಮಾಡುತ್ತಿದ್ದರು. ಇದೀಗ ಬದಲಾದ ರಾಜಕೀಯ ವಿದ್ಯಮಾನಗಳಿಂದ ಶೆಟ್ಟರ್ ಬಿಜೆಪಿ ತೊರೆದು ಕಾಂಗ್ರೆಸ್ನಿಂದ ಸ್ಪರ್ಧಿಸುತ್ತಿದ್ದಾರೆ. ಇದೇ ಕ್ಷೇತ್ರಕ್ಕೆ ಅವರ ಶಿಷ್ಯ ಮಹೇಶ್ ಟೆಂಗಿನಕಾಯಿ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ. ಇದರಿಂದ ಚುನಾವಣೆಯಲ್ಲಿ ಗುರು ಶಿಷ್ಯ ಎದುರುಬದುರಾಗಲಿದ್ದಾರೆ.
ಚಾಲೆಂಜ್ ಟಾಸ್ಕ್ ಆಗಿ ತಗೋತೀವಿ: ಬಿಜೆಪಿ ಸೆಂಟ್ರಲ್ನಲ್ಲಿ ಗಟ್ಟಿಮುಟ್ಟಾದ ಸಂಘಟನೆ ಹೊಂದಿದೆ. ರಾಜ್ಯಾಧ್ಯಕ್ಷರು, ಸಿಎಂ, ಕೇಂದ್ರ ಸಚಿವರು ತೀರ್ಮಾನಿಸಿ ಟಿಕೆಟ್ ನೀಡಿದ್ದಾರೆ. ಚಾಲೆಂಜ್ ಟಾಸ್ಕ್ ಆಗಿ ತಗೋತೀನಿ, ಚುನಾವಣೆಯಲ್ಲಿ ಗೆದ್ದು ಬರ್ತೀನಿ ಎಂದು ಮಹೇಶ ಟೆಂಗಿನಕಾಯಿ ಹೇಳಿದರು. ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಬಿಜೆಪಿ ಒಬ್ಬ ಕಾರ್ಯಕರ್ತನಿಗೆ ಟಿಕೆಟ್ ಕೊಟ್ಟಿದೆ. ಶೆಟ್ಟರ್ ಅವರ ಆರು ಚುನಾವಣೆಗಳಲ್ಲಿಯೂ ನಾನೂ ಕೆಲಸ ಮಾಡಿದ್ದೇನೆ. ಕಾರ್ಯಕರ್ತರ ಮೇಲೆ ವಿಶ್ವಾಸವಿದೆ. ರಾಜಕಾರಣದಲ್ಲಿ ಏನು ಬೇಕಾದರೂ ನಡೆಯುತ್ತದೆ ಅನ್ನೋದಕ್ಕೆ ಇದೇ ಸಾಕ್ಷಿ ಎಂದರು. ಗುರುಗಳ ವಿರುದ್ಧ ಶಿಷ್ಯ ಗೆಲ್ಲಲು ಕಾರ್ಯಕರ್ತರೇ ತಂತ್ರ ರೂಪಿಸುತ್ತಾರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯ ಯೋಜನೆಗಳನ್ನಿಟ್ಟುಕೊಂಡು ಜನರ ಮುಂದೆ ಹೋಗುತ್ತೇನೆ. ಖಂಡಿತಾ ಜಯಭೇರಿ ಬಾರಿಸುತ್ತೇನೆ ಎಂಬ ಭರವಸೆ ವ್ಯಕ್ತಪಡಿಸಿದರು.
ಕಾರ್ಯಕರ್ತರ ಸಂಭ್ರಮ: ಹೈ ವೋಲ್ಟೇಜ್ ಕಣವಾಗಿರುವ ಜಗದೀಶ್ ಶೆಟ್ಟರ್ ಸ್ಪರ್ಧಿಸುವ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಮಹೇಶ ಟೆಂಗಿನಕಾಯಿ ಕಣಕ್ಕಿಳಿದಿದ್ದು, ಟಿಕೆಟ್ ಘೋಷಣೆ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಅಭಿನಂದನೆ ವ್ಯಕ್ತಪಡಿಸಿದರು. ನ್ಯೂ ಕಾಟನ್ ಮಾರ್ಕೆಟ್ ನಲ್ಲಿರುವ ಮಹೇಶ ಟೆಂಗಿನಕಾಯಿ ಕಚೇರಿಯಲ್ಲಿ ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.
ಭಾವುಕ ಸಂದರ್ಭ: ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಭಾವುಕತೆಗೂ ಸಾಕ್ಷಿಯಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಅವರ ಪತ್ನಿ ಕಣ್ಣೀರು ಹಾಕಿರುವ ಬೆನ್ನಲ್ಲೇ ಬಿಜೆಪಿ ಅಭ್ಯರ್ಥಿ ಘೋಷಣೆಯಾಗಿದ್ದು, ಟಿಕೆಟ್ ಆಯ್ಕೆಯಲ್ಲಿ ಮುಂಚೂಣಿಯಲ್ಲಿದ್ದ ಲಿಂಗರಾಜ ಪಾಟೀಲ ಹಾಗೂ ಮಹೇಶ ಟೆಂಗಿನಕಾಯಿ ಭಾವುಕರಾಗಿ ಕಣ್ಣೀರು ಹಾಕಿದರು. ಕಳೆದ ಚುನಾವಣೆಯಲ್ಲಿ ಕಲಘಟಗಿ ಕ್ಷೇತ್ರಕ್ಕೆ ಮಹೇಶ ಟೆಂಗಿನಕಾಯಿಗೆ ಬಿ ಫಾರಂ ಕೊಟ್ಟು ನಂತರ ಶಾಸಕ ನಿಂಬಣ್ಣವರಿಗೆ ಸಿ ಫಾರಂ ಕೊಟ್ಟಿದ್ದರು.
ಇದನ್ನೂ ಓದಿ: ಕೆಲವೊಬ್ಬರಿಗೆ ಬಿಜೆಪಿ ಅಧಿಕಾರಕ್ಕೆ ಬರೋದು ಬೇಡ ಅನಿಸುತ್ತಿದೆ: ಜಗದೀಶ್ ಶೆಟ್ಟರ್