ಧಾರವಾಡ: ಜಾನುವಾರುಗಳಿಗೆ ಕಾಡುತ್ತಿರುವ ಚರ್ಮಗಂಟು ರೋಗ ಜಿಲ್ಲೆಯಲ್ಲಿ ಹೆಚ್ಚುತ್ತಿದ್ದು, ಇದರಿಂದ ಮೂಕ ಪ್ರಾಣಿಗಳು ಅಕ್ಷರಶಃ ಒದ್ದಾಡುತ್ತಿವೆ. ಈ ರೋಗದಿಂದಾಗಿ ಇದುವರೆಗೂ ಜಿಲ್ಲೆಯಲ್ಲಿ 288 ಜಾನುವಾರುಗಳು ಅಸುನೀಗಿವೆ ಎಂದು ಪಶು ಸಂಗೋಪನಾ ಇಲಾಖೆ ಅಧಿಕಾರಿ ಉಮೇಶ್ ಮಾಹಿತಿ ನೀಡಿದ್ದಾರೆ.
ಧಾರವಾಡ ಜಿಲ್ಲೆಯ ಜಾನುವಾರುಗಳಿಗೆ ಚರ್ಮಗಂಟು ರೋಗ ಬಹಳ ಕಾಡುತ್ತಿದೆ. ನಿಖರವಾದ ಔಷಧ ಇಲ್ಲದಿದ್ದರೂ ಕುರಿಗೆ ಬರುವ ಸಿಡುಬು ರೋಗದ ಲಸಿಕೆಯನ್ನೇ ಜಾನುವಾರುಗಳಿಗೆ ನೀಡಲಾಗುತ್ತಿದೆ. ಧಾರವಾಡ ತಾಲೂಕಿನಲ್ಲಿ 42, ಹುಬ್ಬಳ್ಳಿ ತಾಲೂಕಿನಲ್ಲಿ 79, ಕಲಘಟಗಿ ತಾಲೂಕಿನಲ್ಲಿ 27, ಕುಂದಗೋಳ ತಾಲೂಕಿನಲ್ಲಿ 66 ನವಲಗುಂದ ತಾಲೂಕಿನಲ್ಲಿ 74 ಜಾನುವಾರುಗಳು ಅಸುನೀಗಿವೆ ಎಂದು ತಿಳಿಸಿದರು.
ಇದನ್ನು ನಿಯಂತ್ರಣ ಮಾಡುವುದಕ್ಕೆ ಪಶು ಸಂಗೋಪನಾ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಕೂಡ ಇದೆ. ಸುಮಾರು 600 ಜನ ಸಿಬ್ಬಂದಿ ಇಲಾಖೆಗೆ ಸದ್ಯದ ಅವಶ್ಯಕತೆ ಇದೆ. ಧಾರವಾಡ ಜಿಲ್ಲೆಗೆ 78 ಜನ ವೈದ್ಯರು ಸರ್ಕಾರದಿಂದಲೇ ನೇಮಕವಾಗಿದ್ದರು. ಆದರೆ, ಇದರಲ್ಲಿ 48 ಜನ ವೈದ್ಯರು ಮಾತ್ರ ಇದೀಗ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮೊನ್ನೆ ಧಾರವಾಡ ತಾಲೂಕಿನ ಕಲ್ಲೂರು ಗ್ರಾಮದಲ್ಲಿ 8 ರಾಸುಗಳು ಈ ರೋಗಕ್ಕೆ ತುತ್ತಾಗಿವೆ. ಈ ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಸೂಕ್ತ ಚಿಕಿತ್ಸೆ ನೀಡಿ ಮೂಕ ಪ್ರಾಣಿಗಳ ರೋಧನೆ ಕೇಳಬೇಕಿದೆ ಎಂದು ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಹೇಳಿದರು.
ಇದನ್ನೂ ಓದಿ: ಕೊಪ್ಪಳದಲ್ಲಿ ವಿಚಿತ್ರ ಕಾಯಿಲೆ.. ನೂರಾರು ಜಾನುವಾರುಗಳ ಸರಣಿ ಸಾವು