ಧಾರವಾಡ/ಕೊಡಗು: ಬೆಳ್ಳಂಬೆಳಗ್ಗೆ ರಾಜ್ಯದ ವಿವಿಧೆಡೆ ಲೋಕಾಯುಕ್ತ ಅಧಿಕಾರಿಗಳು ದೂರು ಬಂದ ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ಧಾರವಾಡದಲ್ಲಿಯೂ ಲೋಕಾಯುಕ್ತ ದಾಳಿ ನಡೆದಿದ್ದು, ಬೆಳಗಾವಿ ಪಾಲಿಕೆ ಕಂದಾಯ ವಿಭಾಗದ ಸಹಾಯಕ ಆಯುಕ್ತ ಸಂತೋಷ ಆನಿಶೆಟ್ಟರ್ ನಿವಾಸದಲ್ಲಿ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.
ಧಾರವಾಡದ ನಗರದ ಸಪ್ತಾಪುರ ಬಡಾವಣೆಯ ಮಿಚಿಗನ್ ಲೇಔಟ್ನಲ್ಲಿರುವ ಸಂತೋಷ ನಿವಾಸದ ಮೇಲೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ ನಡೆದಿದೆ. ಮನೆಯಲ್ಲಿ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ. ಈ ಮೊದಲು ಸಂತೋಷ ಅವರು ಹುಬ್ಬಳ್ಳಿ - ಧಾರವಾಡ ಪಾಲಿಕೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಕೆಲ ವರ್ಷಗಳ ಹಿಂದೆ ಬೆಳಗಾವಿಗೆ ವರ್ಗಾವಣೆ ಆಗಿದ್ದಾರೆ. ಸಂತೋಷ ಅವರು ಧಾರವಾಡದಲ್ಲಿಯೇ ಮನೆ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.
ಅಲ್ಲದೆ, ಸಂತೋಷ ಅವರ ಬೆಳಗಾವಿಯ ಸುಭಾಷ್ ನಗರದಲ್ಲಿರುವ ಅಪಾರ್ಟ್ಮೆಂಟ್ ಮೇಲೂ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಜೊತೆಗೆ ಸಂತೋಷ ಸಹೋದರನ ಮನೆ ಮೇಲೆಯೂ ಅಧಿಕಾರಿಗಳು ದಾಳಿ ನಡೆದಿದೆ. ಸಂಪಿಗೆ ನಗರದಲ್ಲಿರುವ ಆನಂದ ಮನೆ ಮೇಲೆಯೂ ಕೂಡ ದಾಳಿ ನಡೆಸಿ ಪರಿಶೀಲನೆ ಮಾಡುತ್ತಿದ್ದಾರೆ.
ಕೊಡಗು ಅಪರ ಜಿಲ್ಲಾಧಿಕಾರಿ ಮನೆ ಮೇಲೆ ದಾಳಿ: ಕೊಡಗು ಅಪರ ಜಿಲ್ಲಾಧಿಕಾರಿ ನಂಜುಂಡೇಗೌಡ ಅವರ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಮಡಿಕೇರಿಯ ಕಾರ್ಯಪ್ಪ ವೃತ್ತದ ಬಳಿ ಇರುವ ನಂಜುಂಡೇಗೌಡ ಮನೆ ಮೇಲೆ ಮುಂಜಾನೆ 4 ಗಂಟೆಗೆ ದಾಳಿ ನಡೆಸಿರುವ ಅಧಿಕಾರಿಗಳು, ಪರಿಶೀಲನೆ ನಡೆಸುತ್ತಿದ್ದಾರೆ. ಲೋಕಾಯುಕ್ತ ಎಸ್ಪಿ ಸುರೇಶ್ ಬಾಬು ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಪವನ್ ಕುಮಾರ್, ಇನ್ಸ್ಪೆಕ್ಟರ್ ಲೋಕೇಶ್ ಮತ್ತು ಸಿಬ್ಬಂದಿ ಪರಿಶೀಲನೆ ಕೈಗೊಂಡಿದ್ದಾರೆ. ಜೊತೆಗೆ ಪಿರಿಯಾಪಟ್ಟಣದ ಮಾಕನಹಳ್ಳಿ ಗ್ರಾಮದಲ್ಲಿ ಇರುವ ಅಪರ ಜಿಲ್ಲಾಧಿಕಾರಿ ನಂಜುಂಡೇಗೌಡರ ಮಾವನ ಮನೆ ಹಾಗೂ ಮೈಸೂರಿನಲ್ಲಿ ಇರುವ ಸಂಬಂಧಿಕರ ಮನೆಗಳ ಮೇಲೆಯೂ ಏಕಕಾಲದಲ್ಲಿ ಲೋಕಾಯುಕ್ತ ದಾಳಿ ನಡೆದಿದೆ.
ಕೊಪ್ಪಳದ ನಿರ್ಮಿತಿ ಕೇಂದ್ರದ ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ರೈಡ್: ಕೊಪ್ಪಳದ ನಿರ್ಮಿತಿ ಕೇಂದ್ರದ ಕಚೇರಿ ವ್ಯವಸ್ಥಾಪಕ ಮಂಜುನಾಥ ಬನ್ನಿಕೊಪ್ಪ ಅವರ ಕಚೇರಿ ಹಾಗೂ ನಿವಾಸದ ಮೇಲೆ ಗುರುವಾರ ಬೆಳ್ಳಂಬೆಳಗ್ಗೆ ಲೋಕಾಯಕ್ತ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ. ಒಟ್ಟು ಐದು ತಂಡಗಳಲ್ಲಿ ದಾಳಿ ನಡೆಸಲಾಗಿದ್ದು, ಕೊಪ್ಪಳದ ನಿರ್ಮಿತಿ ಕೇಂದ್ರದ ಬಡಾವಣೆಯಲ್ಲಿರುವ ಕಚೇರಿ ಮತ್ತು ಕೊಪ್ಪಳ ತಾಲೂಕಿನ ಹುಲಿಗಿಯ ಮಾರ್ಕ್ ಇನ್ ಲಾಡ್ಜ್ನಲ್ಲಿಯೂ ರಾಯಚೂರಿನಿಂದ ಬಂದಿರುವ ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ನಡೆಸಿದೆ.
ಇಂಜಿನಿಯರ್ ಮೇಲೆ ಲೋಕಾ ದಾಳಿ: ಲೋಕಾಯುಕ್ತ ಪೊಲೀಸರು ಮೈಸೂರಿನ ವಿಜಯನಗರ 4ನೇ ಹಂತದಲ್ಲಿರುವ ಹಾರಂಗಿ ಅಣೆಕಟ್ಟೆಯ ಅಧೀಕ್ಷಕ ಇಂಜಿನಿಯರ್ (ಯೋಜನಾ ವಿಭಾಗ) ರಘುಪತಿ ಕೆ ಕೆ ಅವರ ಮನೆ ಮೇಲೆ ದಾಳಿ ನಡೆಸಿದ್ದಾರೆ. ಮಡಿಕೇರಿ ಜಿಲ್ಲೆಯಲ್ಲಿನ ಅಧಿಕಾರಿಯ ನಿವಾಸದ ಮೇಲೆ ಲೋಕಾಯುಕ್ತ ದಾಳಿ ಹಿನ್ನೆಲೆಯಲ್ಲಿ ಮೈಸೂರು ನಗರ ಹಾಗೂ ಜಿಲ್ಲೆಯ ವಿವಿಧೆಡೆ ಪರಿಶೀಲನೆ ನಡೆಸುತ್ತಿದ್ದಾರೆ. ಹಾರಂಗಿ ಜಲಾಶಯ ಸೂಪರಿಂಟೆಂಡೆಂಟ್ ಇಂಜಿನಿಯರ್ ರಘುಪತಿ ಅವರ ವಿಜಯನಗರದ ನಿವಾಸದಲ್ಲಿ ಲೆಕ್ಕಪತ್ರ ಪರಿಶೀಲನೆ ನಡೆಯುತ್ತಿದೆ.
ಇದನ್ನೂ ಓದಿ: ಲಂಚ ಪಡೆಯುವಾಗ ಸಿಕ್ಕಿಬಿದ್ದು ಸಾಕ್ಷಿ ನಾಶಕ್ಕಾಗಿ 4,500 ರೂಪಾಯಿ ನೋಟುಗಳನ್ನೇ ನುಂಗಿದ ಚಾಲಾಕಿ ಅಧಿಕಾರಿ!