ಹುಬ್ಬಳ್ಳಿ: ಅಂಗ ವೈಫಲ್ಯದಿಂದ ಬಳಲುವ ರೋಗಿಗಳಿಗೆ ತಮ್ಮ ಅವಯವಗಳನ್ನು ದಾನ ಮಾಡುತ್ತಿದ್ದ ದಾನಿಗಳು ಕೊರೊನಾ ಹಾಗೂ ಸರಿಯಾದ ಅಂಗಾಂಗ ದಾನದ ಮಾಹಿತಿ ಕೊರತೆಯಿಂದಾಗಿ ಲಾಕ್ಡೌನ್ ಸಂದರ್ಭದಲ್ಲಿ ದಾನಿಗಳ ಸಂಖ್ಯೆ ದೊಡ್ಡಮಟ್ಟದಲ್ಲಿ ಇಳಿಕೆ ಕಂಡಿದೆ.
ಮೆದುಳು ನಿಷ್ಕ್ರಿಯಗೊಂಡ ರೋಗಿ ತನ್ನ ಅಂಗಾಂಗ ದಾನ ಮಾಡುವ ಮೂಲಕ ಮತ್ತೊಂದು ಜೀವಕ್ಕೆ ಜೀವದಾನ ಮಾಡಬಹುದು. ಆದರೆ, ಮಾಹಿತಿ ಕೊರತೆಯಿಂದ ಮತ್ತೊಂದು ಜೀವ ಉಳಿಸಬೇಕಿದ್ದ ಜೀವ ಮಣ್ಣಲ್ಲಿ ಮಣ್ಣಾಗಿ ಹೋಗುತ್ತಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಅದೆಷ್ಟೋ ಜನರು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದಾರೆ. ಮೂತ್ರಪಿಂಡ ಸೇರಿದಂತೆ ಬಹುತೇಕ ಅಂಗಗಳು ತುರ್ತು ಸಂದರ್ಭದಲ್ಲಿ ದೊರೆಯದೇ ಇರುವುದರಿಂದ ಸಾವನ್ನಪ್ಪುತ್ತಿದ್ದಾರೆ.
ಒಂದು ಲಕ್ಷ ಜನರಲ್ಲಿ 150ಕ್ಕೂ ಹೆಚ್ಚು ಜನರು ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದಾರೆ. ಇಂತಹವರಿಗೆ ಮೆದುಳು ನಿಷ್ಕ್ರಿಯಗೊಂಡಿರುವ ಹಾಗೂ ಯಾವುದೇ ವ್ಯಕ್ತಿಗಳು ಅಂಗ ದಾನಕ್ಕೆ ಮುಂದಾದಲ್ಲಿ ಮತ್ತೊಂದು ಜೀವಕ್ಕೆ ಪುನರುಜ್ಜೀವನ ನೀಡಿದಂತಾಗುತ್ತದೆ ಎಂದು ವೈದ್ಯರು ಅಭಿಪ್ರಾಯ ಪಡುತ್ತಿದ್ದಾರೆ.