ಧಾರವಾಡ: ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ರಾಷ್ಟ್ರವ್ಯಾಪಿ ಮುಷ್ಕರದ ನಿಮಿತ್ತ ಇಂದು ನಗರದಲ್ಲಿ ಟಾಟಾ ಮಾರ್ಕೋ ಪೋಲೋ ಕ್ರಾಂತಿಕಾರಿ ಕಾರ್ಮಿಕ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಕಾರ್ಮಿಕ ಸಂಘಟನೆಯ ಸದಸ್ಯರು, ಕೇಂದ್ರ ಜಾರಿಗೆ ತಂದಿರುವ ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಸ್ವಾತಂತ್ರ್ಯ ಪೂರ್ವದಿಂದಲೂ ಹೋರಾಡಿ ಪಡೆದುಕೊಂಡ 44 ಕಾರ್ಮಿಕ ಕಾನೂನುಗಳನ್ನು 4 ಕೋಡ್ಗಳಾಗಿ ಪುನರ್ ರಚಿಸುವ ಭರದಲ್ಲಿ ಕಾರ್ಮಿಕ ಸೇವೆ ವೇತನ ಭದ್ರತೆ ಕಸಿಯಲು ಮುಂದಾಗಿದೆ. ಯಾವುದೇ ಕಾರಣಕ್ಕೂ ಕಾರ್ಮಿಕ ಹಾಗೂ ಜನವಿರೋಧಿ ಕಾನೂನು ತಿದ್ದುಪಡಿಗಳನ್ನು ಮಾಡದಂತೆ ನೋಡಿಕೊಂಡು ಕಾರ್ಮಿಕ ಭದ್ರತೆ ಕಾಪಾಡಬೇಕು ಎಂದು ಆಗ್ರಹಿಸಿದರು.